ಮಡಿಕೇರಿ ಫೆ.23 NEWS DESK : ಕೊಡಗು ಜಿಲ್ಲೆಯ ಹಲವು ಬೆಳೆಗಾರರ ಮೇಲೆ ಜಾತಿ ನಿಂದನೆ ಮತ್ತು ಜೀತ ಪದ್ಧತಿ ಆರೋಪದಡಿ ಸತ್ಯಕ್ಕೆ ದೂರವಾದ ಪ್ರಕರಣವನ್ನು ದಾಖಲಿಸಲಾಗಿದೆ. ಈ ರೀತಿಯ ದೂರುಗಳು ಬಂದ ಸಂದರ್ಭ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಒತ್ತಾಯಿಸಿದ್ದಾರೆ.
ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕುಟ್ಟ ಕೊಡವ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಳ ಹಿಂದಿನಿಂದಲೂ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಕೆಲವು ಎನ್‌ಜಿಒಗಳು ಕಾರ್ಮಿಕರ ಹಾದಿ ತಪ್ಪಿಸಿ ಬೆಳೆಗಾರರನ್ನು ಸುಲಿಗೆ ಮಾಡಲು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಜಾತಿ ನಿಂದನೆ ಹಾಗೂ ಜೀತ ವಿಮುಕ್ತಿ ಪ್ರಕರಣದ ದೂರುದಾರರು ಆಧಾರ್ ಕಾರ್ಡ್ಗಳನ್ನು ಹೊಂದಿದ್ದು, ಚುನಾವಣಾ ಗುರುತಿನ ಪತ್ರ ಹೊಂದಿದ್ದಾರೆ. ಪಡಿತರ ಚೀಟಿಯಲ್ಲಿ ತಮ್ಮ ಬೆರಳಚ್ಚನ್ನು ನೀಡಿ ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಸಾಮಾಗ್ರಿ ಖರೀದಿಸಲು ಸಂತೆಗೆ ಹೋಗುತ್ತಿದ್ದಾರೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹೋಗುವಂತೆ ಮಾಡಲಾಗಿದೆ. ಹಲವು ಮಕ್ಕಳು ಸರ್ಕಾರಿ ಹಾಸ್ಟೆಲ್ ನಲ್ಲಿದ್ದಾರೆ.
ಪ್ರಕರಣದ ದೂರುದಾರರು ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಪೋಷಕರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಹುತೇಕ ಎಲ್ಲಾ ಕಾರ್ಮಿಕರಲ್ಲಿ ಸ್ಮಾರ್ಟ್ ಫೋನ್ ಗಳಿವೆ, ಟಿವಿ ಇದೆ. ಸ್ವಂತ ವಾಹನಗಳನ್ನು ಹೊಂದಿದ್ದು, ಕೆಲಸದ ಬಿಡುವು ಹಾಗೂ ರಜೆ ದಿನಗಳಲ್ಲಿ ಇಷ್ಟ ಬಂದಲ್ಲಿಗೆ ತೆರಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜೀತ ಪದ್ಧತಿ ಇದೆ ಎಂದು ವಿನಾಕಾರಣ ಆರೋಪ ಹೊರಿಸಿ ಪ್ರಕರಣ ದಾಖಲಿಸಿ ಬೆಳೆಗಾರರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ವಿಷ್ಣು ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಹೊರಗಿನ ಏನ್‌ಜಿಓಗಳು ಹಾಗೂ ಕೆಲವು ಕಾರ್ಮಿಕ ಮುಖಂಡರು ಸ್ಥಳೀಯ ಕಾರ್ಮಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೆಳೆಗಾರರು ಹಾಗೂ ಕಾರ್ಮಿಕರ ನಡುವಿನ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಇದೇ ರೀತಿ ಜೀತ ಪದ್ಧತಿಯ ಬಗ್ಗೆ ಆರೋಪ ಮಾಡಲಾಗಿತ್ತು. ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲಾ ಇಲಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ಪದ್ಧತಿ ಇಲ್ಲ ಎಂಬುವುದು ಸಾಬೀತಾಗಿತ್ತು. ಪರಿಸ್ಥಿತಿ ಹೀಗಿರುವಾಗ ಮತ್ತೆ ಮತ್ತೆ ಬೆಳೆಗಾರರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದರು.
ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೆಂಗಡ ರಮೇಶ್, ಕಾರ್ಯದರ್ಶಿ ಕೊಂಗಂಡ ಸುರೇಶ್, ಖಜಾಂಚಿ ಮಚ್ಚಮಾಡ ಸುಬ್ರಮಣಿ, ಜಂಟಿ ಕಾರ್ಯದರ್ಶಿ ತೀತಿರ ಮಂದಣ್ಣ, ಆಡಳಿತ ಮಂಡಳಿ ಸದಸ್ಯರಾದ ಚೆಪ್ಪುಡೀರ ಪಾರ್ಥ, ಚೆಪ್ಪುಡೀರ ಬೋಪಣ್ಣ, ಚೆಕ್ಕೇರ ಕಾರ್ಯಪ್ಪ ರಾಬಿನ್, ಪೆಮ್ಮಣಮಾಡ ವಾಸು ಉತ್ತಪ್ಪ, ತೀತಿರ ಕಬೀರ್, ಕೆ.ಬಾಡಗ ಗ್ರಾ.ಪಂ.ಅಧ್ಯಕ್ಷ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಬೆಳೆಗಾರ ಮಚ್ಚಮಾಡ ಪ್ರಕಾಶ್, ವಕೀಲ ಬಾಚರಣಿಯಂಡ ಅಯ್ಯಪ್ಪ, ಕಳ್ಳಂಗಡ ಸೌರಭ್, ಅಳಮೇಂಗಡ ಮೋಟಯ್ಯ, ಗುಡಿಯಂಗಡ ರಾಜ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.










