ಮಡಿಕೇರಿ ಫೆ.24 NEWS DESK : ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಕೋಕೇರಿ-ಕೊಳಕೇರಿ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿರುವ ಗ್ರಾಮಸ್ಥರು, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಕೇರಿ ಗ್ರಾಮಸ್ಥ ಗಿರೀಶ್ ಪೂಣಚ್ಚ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆದಾಡುವುದೇ ಕಷ್ಟವಾಗಿದೆ, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಆಡಳಿತ ವ್ಯವಸ್ಥೆಯ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ಮಾ.11 ರಂದು ಕೊಳಕೇರಿ-ಕಕ್ಕಬ್ಬೆವರೆಗೆ `ರಸ್ತೆ ತಡೆ’ ಪ್ರತಿಭಟನೆ ನಡೆಸಲಾಗುವುದು ಎಂದರು.
ನಾಪೋಕ್ಲು ಸಂಪರ್ಕ ರಸ್ತೆಯಾಗಿರುವ ಕೋಕೇರಿ-ಕೊಳಕೇರಿ ರಸ್ತೆಯು ಸುಮಾರು 5 ಕಿ.ಮೀ ಸಂಪೂರ್ಣ ಹದಗೆಟ್ಟಿದ್ದು, ಕಳೆದ 20 ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಈ ರಸ್ತೆ ಕೋಕೇರಿ, ಕೊಳಕೇರಿ, ಬಾವಲಿ, ಕಿರುಂದಾಡು, ನರಿಯಂದಡ ಗ್ರಾಮ ಮತ್ತು ವಿರಾಜಪೇಟೆ ಸಂಪರ್ಕ ರಸ್ತೆಯಾಗಿದೆ. ಪ್ರತಿನಿತ್ಯ ಶಾಲಾ ವಾಹನಗಳು ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಪಾದಾಚಾರಿಗಳು ಕೂಡ ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ರಸ್ತೆ ಇದೆ ಎಂದು ಅಸಮಾಧಾನ ವ್ಯಕಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಧಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರೆಲ್ಲರು ಸೇರಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗುಣಮಟ್ಟದ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡುತ್ತಾರೆ. ಆದರೆ ಇಲ್ಲಿಯವರೆಗೆ ರಸ್ತೆ ಅವ್ಯವಸ್ಥೆ ಬಗ್ಗೆ ಯಾರೂ ಕಾಳಜಿ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊಳಕೇರಿ-ಕೋಕೇರಿ ಗ್ರಾಮದಲ್ಲಿ ಸುಮಾರು 3,500 ಮತದಾರರಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರಿಸುವುದು ಖಚಿತ ಎಂದು ಗಿರೀಶ್ ಪೂಣಚ್ಚ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಸಿ.ಪಿ.ಜಗದೀಶ್ ನಂದ, ಚೆರುವಾಳಂಡ ಲವೀನ್, ಎಂ.ಎ.ಮೊೈದು ಹಾಗೂ ಎಂ.ಎಂ.ಮಹಮ್ಮದ್ ಉಪಸ್ಥಿತರಿದ್ದರು.








