ಮಡಿಕೇರಿ ಫೆ.24 NEWS DESK : ಕಮಿಷನ್ ದಂಧೆ ನಡೆಸುತ್ತಿದ್ದ ಬಿಜೆಪಿ ಸರ್ಕಾರವನ್ನು ಜನ ಮನೆಗೆ ಕಳುಹಿಸಿದ್ದಾರೆ. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಪಾರದರ್ಶಕ ಆಡಳಿತ ನೀಡುತ್ತಿದ್ದು, ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಿದ ಕಾರಣಕ್ಕಾಗಿ ನಮ್ಮ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ಮಂದಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿರುಗೇಟು ನೀಡಿದ್ದಾರೆ.
ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣಗೊಂಡಿರುವ ಗೋಣಿಕೊಪ್ಪಲು- ಅರುವತ್ತೊಕ್ಕಲು ಸಂಪರ್ಕ ಸೇತುವೆಯನ್ನು ಉದ್ಘಾಟಿಸಿದ ನಂತರ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹುದಿಕೇರಿ ಸಹಕಾರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ಅವ್ಯವಹಾರದ ಬಗ್ಗೆ ಪ್ರಶ್ನಿಸುವುದು ತಪ್ಪೇ ಎಂದು ಪ್ರಶ್ನಿಸಿದ ಪೊನ್ನಣ್ಣ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಪ್ರತಿಭಟನೆ ನಡೆಸುತ್ತಾರೆ, ಪಾರದರ್ಶಕ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ ಎಂದರು.
ಬಿಜೆಪಿ ಪರ ಮತ ಚಲಾಯಿಸಿದ್ದವರು ಇಂದು ಕಾಂಗ್ರೆಸ್ ಸರ್ಕಾರದ ಪಾರದರ್ಶಕ ಆಡಳಿತವನ್ನು ಮೆಚ್ಚಿ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಬಿಜೆಪಿ ಬೆಂಬಲಿತರ ಕೈಯಲ್ಲಿದ್ದ ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲು ಗ್ರಾ.ಪಂ ಅಧಿಕಾರ ಕಾಂಗ್ರೆಸ್ ಪರವಾಗಲು ಬಿಜೆಪಿ ದುರಾಡಳಿತವೇ ಕಾರಣ. ಸಕ್ರಿಯ ಕಾರ್ಯಕರ್ತರನ್ನೇ ಉಳಿಸಿಕೊಳ್ಳಲಾಗದೆ ಭ್ರಮನಿರಸನಗೊಂಡಿರುವ ಬಿಜೆಪಿ ಅವ್ಯವಹಾರವನ್ನು ಮುಚ್ಚಿ ಹಾಕಲು ಹೋರಾಟದ ನೆಪ ಮಾಡುತ್ತಿದೆ ಎಂದು ಆರೋಪಿಸಿದರು.
ನ.20 ರಂದು ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಇದೀಗ ಗುಣಮಟ್ಟದ ಕಾಮಗಾರಿಯೊಂದಿಗೆ ಉದ್ಘಾಟನೆಗೊಳಿಸಿದ್ದೇವೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಪೊನ್ನಣ್ಣ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಗ್ರಾ.ಪಂ ಅಧ್ಯಕ್ಷ ಕುಲ್ಲಚಂಡ ಗಣಪತಿ, ಉಪಾಧ್ಯಕ್ಷೆ ಮಂಜುಳ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜ್, ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪ್ರಮುಖರಾದ ಅಜಿತ್ ಅಯ್ಯಪ್ಪ, ಅಜ್ಜಿಕುಟ್ಟೀರ ಪೊನ್ನು, ಸಮ್ಮದ್, ಖಾಲಿದ್, ಅಂಕಿತ್, ಎ.ಜೆ.ಬಾಬು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.










