ಮಡಿಕೇರಿ ಫೆ.25 NEWS DESK : ನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯ ಬಳಿ ‘ಮಡಿಕಟ್ಟೆ’ ನಿರ್ಮಿಸುವ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ನಗರಸಭಾ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.
ನಗರದ ದಾಸವಾಳ ರಸ್ತೆಯ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿವಾಳರ ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ಭಾನುವಾರ ನಡೆದ ಮಡಿವಾಳರ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಡಿವಾಳ ಸಮಾಜದವರು ಕಾಯಕವೇ ಕೈಲಾಸ ಎಂಬಂತೆ ಕಾಯಕ ವೃತ್ತಿ ಮೂಲಕ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ ಎಂದು ತಿಳಿಸಿದರು.
ಮಡಿವಾಳ ಸಮಾಜದವರು ಮಡಿವಾಳರ ಸಂದೇಶಗಳನ್ನು ತಿಳಿದುಕೊಂಡು, ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು. ಮಹಿಳೆಯರು, ವೃತ್ತಿನಿರತ ಶ್ರಮಜೀವಿಗಳು, ಬಡವರು ಅಭಿವೃದ್ಧಿ ಹೊಂದಬೇಕು. ಎಲ್ಲರಿಗೂ ಸಮಬಾಳು-ಸಮಪಾಲು ಎಂಬ ಶರಣರ ಸಂದೇಶವನ್ನು ಸಮಾಜದಲ್ಲಿ ಹೇಳಿದವರಲ್ಲಿ ಮಡಿವಾಳ ಮಾಚಿದೇವ ಅವರು ಒಬ್ಬರು ಎಂದು ಅನಿತಾ ಪೂವಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಮಾಡುವ ಗುರಿ ಶರಣ ಮಡಿವಾಳ ಮಾಚಿದೇವರ ಬದುಕಾಗಿತ್ತು. 12 ನೇ ಶತಮಾನದಲ್ಲಿ ಕ್ರಾಂತಿಕಾರಕ ಹೋರಾಟ ನಡೆಸಿ ಶರಣರ ವಚನಗಳನ್ನು ಜನÀರಲ್ಲಿ ಬಿತ್ತರಿಸಲು ಪ್ರಯತ್ನಿಸಿದರು. ಹುಟ್ಟಿನಿಂದ ಮಡಿವಾಳನಾಗಿದ್ದರೂ ಅಚಲ ಕಾಯಕ ನಿಷ್ಠರಾಗಿದ್ದರು ಎಂದರು.
ಭಾರತದ ಇತಿಹಾಸದಲ್ಲಿ ಸಂಸತ್ ಭವನ ಮೊದಲು ಅಸ್ತಿತ್ವಕ್ಕೆ ಬಂದದ್ದು ಬಸವ ಕಲ್ಯಾಣದಲ್ಲಿ, ಆ ನಿಟ್ಟಿನಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಶರಣರೊಂದಿಗೆ ಮಡಿವಾಳ ಮಾಚಿದೇವರು ಶಕ್ತಿಮೀರಿ ದುಡಿದಿದ್ದಾರೆ. ರಾಜ್ಯದಲ್ಲಿ ಮಡಿವಾಳ ಸಮಾಜವು 8 ಲಕ್ಷ ಜನಸಂಖ್ಯೆ ಹೊಂದಿದ್ದು, ಹಿಂದುಳಿದ ವರ್ಗವಾಗಿದೆ. ಆ ದಿಸೆಯಲ್ಲಿ ಸರ್ಕಾರದ ಹಲವು ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಮಡಿವಾಳರ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಾತನಾಡಿ ವೀರಭದ್ರ ಮುನೇಶ್ವರ ದೇವಾಲಯ ಬಳಿ ಈ ಹಿಂದೆ ನಗರಸಭೆಯಿಂದ ಸೇತುವೆ ನಿರ್ಮಿಸಲಾಗಿದೆ. ಅದೇ ರೀತಿ ಈ ಬಾರಿ ಮಡಿಕಟ್ಟೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಮಡಿವಾಳ ಸಮಾಜದ ಹಿರಿಯ ಮುಖಂಡರಾದ ಸುಬ್ರಹ್ಮಣ್ಯ, ಮಂಜುನಾಥ್ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು, ದೀಪಿಕಾ ಸಂದೀಪ್ ನಿರೂಪಿಸಿದರು, ಜ್ಯೋತಿ ಪ್ರಾರ್ಥಿಸಿದರು, ಕಾರ್ತಿಕ್ ವಂದಿಸಿದರು.











