ಮಡಿಕೇರಿ ಫೆ.25 NEWS DESK : ಕೊಡಗಿನ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗಾಗಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಮಾಜಿ ಸೈನಿಕರ ಸಮಾವೇಶವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಕೇಂದ್ರ ಕಚೇರಿಯ ಆಶ್ರಯದಲ್ಲಿ ಎಂ.ಇ.ಜಿ ಸೆಂಟರ್‌ನಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ 600ಕ್ಕೂ ಹೆಚ್ಚು ಮಾಜಿ ಸೈನಿಕರು ಹಾಗೂ ಅವಲಂಬಿತರು ಭಾಗವಹಿಸಿದ್ದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಮತ್ತು ಶೌರ್ಯದ ಶ್ರೀಮಂತ ಪರಂಪರೆ ಹೊಂದಿರುವ ಕೊಡಗು ಜಿಲ್ಲೆಯ ಯೋಧರಿಗೆ ಇದೇ ಸಂದರ್ಭ ವಿವಿಧ ಸೌಲಭ್ಯಗಳನ್ನು ನೀಡಲಾಯಿತು.
ಸ್ಪರ್ಷ್ ಪಿಂಚಣಿ ವಿತರಣಾ ವ್ಯವಸ್ಥೆ ಮತ್ತು ಇಸಿಹೆಚ್‌ಎಸ್ ವ್ಯವಹಾರಗಳಿಗಾಗಿ ಹೊಸದಾಗಿ ನವೀಕರಿಸಲಾದ ಮೊಬೈಲ್ ಅಪ್ಲಿಕೇಶನ್, ಮಾಜಿ ಸೈನಿಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಂಟ್ರೋಲರ್ ಡಿಫೆನ್ಸ್ ಅಕೌಂಟ್(ಸಿಡಿಎ) ಪ್ರತಿನಿಧಿಗಳು, ಭಾರತೀಯ ಸೇನಾ ದಾಖಲೆಗಳ ಕಚೇರಿಗಳು ಮತ್ತು ಬ್ಯಾಂಕ್ ಸಹಾಯ ಕೇಂದ್ರಗಳು ಸ್ಥಾಪಿಸಿದ ಸ್ಟಾಲ್‌ಗಳ ಮೂಲಕ ತಮ್ಮ ಪಿಂಚಣಿ ಮತ್ತು ದಾಖಲಾತಿಗೆ ಮಾಜೀ ಸೈನಿಕರು ಸಿಬ್ಬಂದಿಗಳೊಂದಿಗೆ ನೇರವಾಗಿ ಸಂವಹನ ನಡೆಸಿದರು.
ತಕ್ಷಣದ ಪರಿಹಾರಕ್ಕಾಗಿ ಕುಂದುಕೊರತೆಗಳನ್ನು ನೀಗಿಸಲು ಮತ್ತು ಇತ್ತೀಚಿನ ನೀತಿಗಳ ಮಾಹಿತಿಯನ್ನು ಪಡೆಯಲು ಅವಕಾಶ ಮಾಡಿಕೊಡಲಾಯಿತು. ಇದೇ ಸಮಾವೇಶದಲ್ಲಿ ಮಾಜೀ ಯೋಧರಿಗಾಗಿ ಕಣ್ಣು, ದಂತ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನೂ ಸಹ ಆಯೋಜಿಸಲಾಗಿತ್ತು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಭಾರತ ಏರಿಯಾ ಕಮಾಂಡಿಂಗ್ ಜನರಲ್ ಲೆಫ್ಟಿನೆಂಟ್ ಜನರಲ್ ಕೆ.ಎಸ್.ಬ್ರಾರ್, ರಾಷ್ಟ್ರದ ಅತ್ಯುನ್ನತ ಹಿತಾಸಕ್ತಿಗಳಿಗಾಗಿ ಮಾಡಿದ ಸೇವೆಗಳು ಮತ್ತು ತ್ಯಾಗಗಳಿಗಾಗಿ ಹಾಜರಿದ್ದ ಮಾಜೀ ಯೋಧರು ಮತ್ತವರ ಅವಲಬಿತರಿಗೆ ಕೃತಜ್ಞತೆ ಸಲ್ಲಿಸಿದರು. ಸೈನಿಕ ಕಲ್ಯಾಣ ಇಲಾಖೆ ಮಾಜೀ ಸೈನಿಕರು ಹಾಗೂ ಅವರ ಅವಲಂಬಿತರ ಕಲ್ಯಾಣವನ್ನು ಬಯಸುತ್ತದೆ ಎಂದು ಭರವಸೆ ನೀಡಿದರು.










