ಮೈಸೂರು ಫೆ.29 NEWS DESK : ಕೊಡಗು ಜಿಲ್ಲೆಯ ಜನರ ಬಹು ನಿರೀಕ್ಷಿತ ರೈಲ್ವೇ ಯೋಜನೆಯ ಫೈನಲ್ ಲೊಕೇಷನ್ ಸರ್ವೆ ಕಾರ್ಯವು ಮುಕ್ತಾಯಗೊಂಡಿದ್ದು ಅದನ್ನು ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಬೇಕಾಗಿದೆ. ಕಳೆದ ಒಂದು ದಶಕದಿಂದಲೂ ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮೊದಲಿಗೆ 1682 ಕೋಟಿ ರೂಪಾಯಿಗಳ ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ನಂತರ ಯೋಜನಾ ವೆಚ್ಚ 1839 ಕೋಟಿ ರೂಪಾಯಿಗಳಿಗೆ ಏರಿಕೆ ದಾಖಲಿಸಿತು.
ಇದೀಗ ಕೇಂದ್ರ ಸರ್ಕಾರದ ನೂತನ ಮಾನದಂಡಕ್ಕೆ ಅನುಗುಣವಾಗಿ 89 ಕಿಲೋಮೀಟರ್ ಉದ್ದದ ಈ ಯೋಜನೆಯ ವೆಚ್ಚ 3168.77 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ ಎಂದು ಮೈಸೂರು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಎರಡು ವರ್ಷಗಳ ಹಿಂದೆಯೇ ಫೈನಲ್ ಲೊಕೇಷನ್ ಸರ್ವೆ ನಡೆಸಲಾಗಿದ್ದರೂ ಅದನ್ನು ತಾಂತ್ರಿಕ ಕಾರಣಗಳಿಂದ ಹಿಂತಿರುಗಿಸಲಾಗಿತ್ತು. ಈ ನಡುವೆ ಕೇಂದ್ರ ಸರ್ಕಾರವು ನೂತನ ರೈಲ್ವೇ ಹಳಿ ನಿರ್ಮಾಣ ಮಾಡಬೇಕಾದರೆ ಗರಿಷ್ಠ ಘಂಟೆಗೆ 165 ಕಿಮೀ ವೇಗದಲ್ಲಿ ರೈಲು ಚಾಲನೆಗೆ ಅವಕಾಶವಿರುವಂತೆ ಯೋಜನೆ ರೂಪಿಸುವಂತೆ ನಿಯಮಾವಳಿ ರೂಪಿಸಿತ್ತು. ಈ ಹಿಂದೆ ಘಂಟೆಗೆ 100 ಕಿಮೀ ವೇಗದಲ್ಲಿ ಚಾಲನೆಗೆ ಯೋಜನೆ ರೂಪಿಸಲಾಗಿತ್ತು.
ಅಲ್ಲದೆ ಈ ನಡುವೆ ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವೂ ಆಗಲಿರುವ ಹಿನ್ನೆಲೆಯಲ್ಲಿ ಈ ಹೆದ್ದಾರಿಗೆ ರೈಲ್ವೇ ಇಲಾಖೆಯಿಂದ ನಾಲ್ಕು ಸೇತುವೆ ನಿರ್ಮಿಸುವುದೂ ಯೋಜನೆಯಲ್ಲಿ ಸೇರಿದೆ. ಹುಣಸೂರು ಸಮೀಪ ಒಂದು ಸಣ್ಣ ಹೊಳೆಗೆ ಸೇತುವೆ , ಎರಡು ಅಂಡರ್ ಪಾಸ್ ಗಳು ಮತ್ತು ಒಂದು ಒವರ್ ಬ್ರಿಡ್ಜ್ ಈ ರೈಲೇ ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆ ಅಗಿದ್ದು ಇದಕ್ಕಾಗಿ 68 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಆಗಲಿದೆ. ಇದಲ್ಲದೆ 89 ಕಿಲೋಮೀಟರ್ ಉದ್ದದ ಮಾರ್ಗಕ್ಕೆ ಒಟ್ಟು 10 ನಿಲ್ದಾಣಗಳೂ ಬರಲಿವೆ.
ಬೆಳಗೊಳ, ಬೆಟ್ಟದೂರು. ಹಂದನಹಳ್ಳಿ, ತಿಪ್ಪೂರು, ಹುಣಸೂರು, ಕಲ್ಲಳ್ಳಿ, ಪಿರಿಯಾಪಟ್ಟಣ, ಚಿಕ್ಕ ಮಾಗಳಿ, ಮಂಚದೇವನ ಹಳ್ಳಿ, ಕುಶಾಲನಗರದಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣ ಆಗಲಿದೆ. ಹಿಂದಿನ ಯೋಜನೆ ಪ್ರಕಾರ ಈ ನಿಲ್ದಾಣ ಹೆದ್ದಾರಿಯ ಒಂದು ಫರ್ಲಾಂಗ್ ದೂರದಲ್ಲಿಯೇ ನಿರ್ಮಾಣ ಆಗಬೇಕಿತ್ತು. ಆದರೆ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ ಮೂರು ಕಿ.ಮೀ ಒಳ ಭಾಗಕ್ಕೆ ಸ್ಥಳಾಂತರಿಸಲಾಗಿದೆ. ಉದ್ದೇಶಿತ ರೈಲ್ವೇ ನಿಲ್ದಾಣಗಳ ಒಂದೂವರೆ ಕಿಲೋಮೀಟರ್ ಉದ್ದಕ್ಕೂ ಸುಮಾರು ನೂರು ಮೀಟರ್ ಗಳ ವರೆಗೆ ಮತ್ತು ರೈಲ್ವೇ ಹಳಿ ಹಾದು ಹೋಗುವ ಸ್ಥಳದಲ್ಲಿ 25 ಮೀಟರ್ ಗಳಷ್ಟು ಭೂಸ್ವಾಧೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದ್ದು ಇದರಲ್ಲಿ ಎರಡು ಟ್ರಾಕ್ ಗಳು ನಿರ್ಮಾಣ ಆಗಲಿವೆ.
ಈ ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವು ಭೂ ಸ್ವಾಧೀನ ಮಾಡಿಕೊಡಬೇಕಾಗಿದ್ದು ಯೋಜನೆಯನ್ನು ಎರಡೂ ಸರ್ಕಾರಗಳು ಶೇ.50 ರಷ್ಟು ವೆಚ್ಚದಲ್ಲಿ ಅನುಷ್ಠಾನಗೊಳಿಸಬೇಕಿದೆ.
ಮೊದಲು ಈ ಯೋಜನೆಯು ಆದಾಯದ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಕಾರಣದಿಂದ ಕೇಂದ್ರವು ಅನಿಮತಿ ನಿರಾಕರಿಸಿತ್ತು. ನಂತರ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಪುನಃ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದೀಗ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಈ ಯೋಜನೆಗೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ ಅಲ್ಲದೆ ಈಗಾಗಲೇ ರಾಜ್ಯದಲ್ಲಿ ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಹಣ ಒದಗಿಸುವುದೂ ಅನುಮಾನವಾಗಿದೆ. ಹೀಗಾಗಿ ಯೋಜನೆ ಇನ್ನಷ್ಟು ವರ್ಷ ಮುಂದೆ ಹೋಗುವ ಸಾದ್ಯತೆ ಇದೆ.
ಈಗ ಫೈನಲ್ ಲೊಕೇಷನ್ ಸರ್ವೆ ಪೂರ್ಣಗೊಂಡಿದ್ದು ಮೈಸೂರಿನಿಂದ ಹುಬ್ಬಳ್ಳಿಯ ನೈರುತ್ಯ ರೈಲ್ವೇ ಯ ಕೇಂದ್ರ ಕಚೇರಿಗೆ ಜನರಲ್ ಮ್ಯಾನೇಜರ್ ಅವರ ಕಚೇರಿಗೆ ಹೋಗಿ ನಂತರ ಅಲ್ಲಿಂದ ದೆಹಲಿಯ ರೈಲ್ವೇ ಮಂಡಳಿಗೆ ಕಳಿಸಿಕೊಡಲಾಗುತ್ತದೆ. ರೈಲ್ವೇ ಮಂಡಳಿ ಅನುಮೋದನೆ ನೀಡಿದ ಕೂಡಲೇ ಕೆಲಸ ಪ್ರಾರಂಭವಾಗಲಿದೆ.
ಈ ಕುರಿತು ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಮೈಸೂರು – ಕೊಡಗು ನಡುವಣ ರೈಲು ಮಾರ್ಗ ಶೀಘ್ರ ಸಾಕಾರಗೊಳ್ಳಲಿದೆ. ನಾವು ವಿವರವಾದ ಯೋಜನಾ ವರದಿಯೊಂದಿಗೆ ಸಿದ್ಧರಿದ್ದೇವೆ ಮತ್ತು ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಬೇಕು. ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ಇದನ್ನು ಮಾಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾದರೆ ಮಾತ್ರ ಯೋಜನೆ ಚುರುಕುಗೊಳ್ಳಲಿದೆ ಇಲ್ಲವಾದಲ್ಲಿ ಮತ್ತೆ ನೆನೆಗುದಿಗೆ ಬೀಳಲಿದೆ.
ವರದಿ : ಜೋಯ