ಸಿದ್ದಾಪುರ ಮಾ.1 NEWS DESK : ಕಾರ್ಮಿಕ ವಿರೋಧಿ ನೀತಿ, ಬೆಲೆ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿದ್ದಾಪುರದಲ್ಲಿ ಸಿಐಟಿಯು ಸಂಘಟನೆ ಪ್ರತಿಭಟನೆ ನಡೆಸಿತು.
ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸುವುದರೊಂದಿಗೆ ಪ್ರಧಾನಿಗೆ ಪತ್ರ ಬರೆದು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, 2024 ರ ಲೋಕಸಭಾ ಚುನಾವಣೆಗಳು ಮತ್ತೆ ಪ್ರಾರಂಭವಾಗುತ್ತಿದೆ. ಎನ್.ಡಿ.ಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 2 ಕೋಟಿ ಉದ್ಯೋಗದ ಸೃಷ್ಟಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಡಾ.ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ಹೇಳಿ ವರ್ಷಗಳೇ ಕಳೆದಿದೆ ಆದರೆ ‘ಸಬ್‌ಕಾ ಸಾಥ್’ ಎಂದು ಜನಸಾಮಾನ್ಯರು ಕೊಂಡುಕೊಳ್ಳುವ ಸಾಮಾರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ ಗೊಳಿಸಿದ್ದಾರೆ. ಜನರಿಗೆ 2700 ಕ್ಯಾಲೋರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಾಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ ಎಂದರು.
ಆರ್ಥಿಕ ಬಿಕ್ಕಟ್ಟನ್ನು ಕರೋನಾ ಮುಂಚಿತವಾಗಿದ್ದ ಬೆಳವಣಿಗೆಗೆ ಹೋಲಿಸದೇ ಕರೋನಾ ನಂತರದ ಬೆಳವಣಿಗೆಗೆ ಹೋಲಿಸಿ ಆರ್ಥಿಕ ಬಿಕ್ಕಟ್ಟು ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ಸುಧಾರಿಸಿದ್ದರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ. 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಭಾರತದಲ್ಲಿ ಶೇ.42.3 ನಿರುದ್ಯೋಗ ಏಕೆ? ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರತಿಪಾದನೆ ಮಾಡುವ ಸರ್ಕಾರ 100ಕ್ಕೆ ಶೇ.60 ಗುತ್ತಿಗೆ-ಹೊರಗುತ್ತಿಗೆಯ ಹುದ್ದೆಗಳನ್ನು ಏಕೆ ಸೃಷ್ಟಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಿಸಿದ್ದಲ್ಲದೇ ಸರ್ಕಾರದ ಆಸ್ತಿಯನ್ನು NMP ಯ ಮುಖಾಂತರ ಖಾಸಗೀಯವರಿಗೆ ದಾನ ಮಾಡಿದರೆ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಲು ಸಾದ್ಯವಿದೆಯಾ? ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ ಎಂದರೆ ಸಾರ್ವಜನಿಕ ಒಡೆತನವನ್ನು ಖಾಸಗಿ ವ್ಯಕ್ತಿಗಳಿಗೆ ಅಡಮಾನ ಇಡುವುದೇ? ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿ ತೆಗೆದು ಕೊಳ್ಳುವ ನೀತಿ ಸರಿಯೇ ಎಂದರು.
ಆದ್ದರಿಂದ ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕೆಂದೂ ಒತ್ತಾಯಿಸಿ ದೇಶದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳುವಳಿ ನಡೆಸುತ್ತಿದ್ದಾರೆ. ಇಂತಹ ಚಳುವಳಿಗಳ ಮೇಲೆ ದೆಹಲಿಯಲ್ಲಿ ಪೊಲೀಸ್ ದಬ್ಬಾಳಿಕೆ ಮಾಡಿರುವುದನ್ನು ಖಂಡನೀಯ ಎಂದರು.
ಬೇಡಿಕೆಗಳು ::
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು, ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಮತ್ತು NMP ಯನ್ನೊಳಗೊಂಡಂತೆ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು, ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು, ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರಚಿಸಬೇಕು, ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳನ್ನು ರೂಪಿಸುವುದು, ನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ. 600 ರೂ ಕೂಲಿ ನಿಗದಿ ಮಾಡಿ, ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡುವುದು, ನ್ಯಾಯಯುತ GST ಪಾಲನ್ನು ರಾಜ್ಯಗಳಿಗೆ ಕೊಡುವ ಮುಖಾಂತರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಒತ್ತಾಯಿಸಿದರು.
ಕನಿಷ್ಟ ವೇತನವನ್ನು ಅಕುಶಲ ಕಾರ್ಮಿಕರಿಗೆ ರೂ 31,000 ಹಾಗು ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ.15 ಹೆಚ್ಚಳದೊಂದಿಗೆ ನಿಗದಿಪಡಿಸಬೇಕು. ಗ್ರಾಹಕ ಬೆಲೆ ಸೂಚ್ಯಾಂಕದ ಪ್ರತಿ ಅಂಶದ ಹೆಚ್ಚಳಕ್ಕೆ ಪ್ರತಿ ದಿನಕ್ಕೆ 6 ಪೈಸೆಗಳ ತುಟ್ಟಿಭತ್ಯೆ ನಿಗದಿಪಡಿಸಬೇಕು, ಬೆಲೆ ಸೂಚ್ಯಾಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು, ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ನಮ್ಮ ಸಂವಿಧಾನದ ಪರಿಚ್ಛೇದ 39(ಡಿ)ನಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು, ಕಡಿಮೆ ವೇತನ ನೀಡುತ್ತಾ ಗುತ್ತಿಗೆ-ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು, ಕೇಂದ್ರ-ರಾಜ್ಯ ಸರ್ಕಾರಗಳು, ವಿವಿಧ ಇಲಾಖೆಗಳು, ನಿಗಮ ಮಂಡಳಿ ಆಸ್ಪತ್ರೆ, ಮುಸ್ಸಿಪಾಲಿಟಿ, ಖಾಸಗಿ ಕಂಪನಿಗಳಲ್ಲಿ ಗುತ್ತಿಗೆ ಆಧಾರಿತವಾಗಿ ವರ್ಷಗಟ್ಟಲೆಯಿಂದ ದುಡಿಸಿಕೊಳ್ಳುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂಯಾತಿಗೆ ಶಾಸನ ತರಬೇಕು, ದೇಶದಲ್ಲಿರುವ ಕೋಟ್ಯಾಂತರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಭಾಗವಾಗಿ ಕನಿಷ್ಠ ಮಾಸಿಕ ಪಿಂಚಣಿ 6,000/- ರೂ. ಪಿ.ಎಫ್. ಪಿಂಚಣಿ 10,000/-ಕ್ಕೆ ಹೆಚ್ಚಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆಗೆ ಜಿಡಿಪಿ 6%ನ್ನು ಮೀಸಲಿರಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು-1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು-1996 ಗಳನ್ನು ಪುನರ್ ಸ್ಥಾಪಿಸಬೇಕು, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಪೌಷ್ಠಿಕ ಆಹಾರಕ್ಕಾಗಿರುವ ಯೋಜನೆಗಳಾದ ICDS, MDM, NHM, ICPS, SSA, MNRE ಮುಂತಾದ ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು, 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು. NEP ನಿಲ್ಲಿಸಬೇಕು, 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು 20 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ರೂ. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಠ 10 ಸಾವಿರ ರೂ. ಪಿಂಚಣಿ ಕೊಡಬೇಕು, 29 ಕಾರ್ಮಿಕ ಕಾನೂನುಗಳ ಸಂಯುಕ್ತ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿಗೊಳಿಸಬೇಕು, ಬರಪಿಡಿತ ಕರ್ನಾಟಕ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಜಿಲ್ಲಾ ಖಜಾಂಚಿ ಕುಟ್ಟಪ್ಪನ್, ಉಪಾಧ್ಯಕ್ಷ ಮಹದೇವ್, ಪ್ರಮುಖರಾದ ಟಿ.ಟಿ ಉದಯನ್, ಚಂದ್ರನ್, ಶಿವರಾಮನ್, ಮುಸ್ತಫ, ಮಹದೇವ ಎಂ.ಜಿ ಜೋಸ್, ಸೌಕತ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಬೇಡಿಕೆಗಳನ್ನು ಮುಂದಿಟ್ಟು ಸಾವಿರಾರು ಮಂದಿ ಸಹಿ ಮಾಡಿರುವ ಪತ್ರವನ್ನು ಅಂಚೆ ಕಚೇರಿಗಳ ಮೂಲಕ
ಪ್ರಧಾನಮಂತ್ರಿಗೆ ಕಳಿಸಲು ಜಿಲ್ಲಾಧಿಕಾರಿಗಳಿಗೆ ಕಳಿಸಲಾಯಿತು.