ಮಡಿಕೇರಿ ಮಾ.2 NEWS DESK : ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದೊಂದಿಗೆ ಸಮುದಾಯ ಶಿಕ್ಷಣ ಅತ್ಯಂತ ಅವಶ್ಯವಾಗಿದ್ದು, ಅದನ್ನು ಎನ್.ಎಸ್.ಎಸ್ ಕಲಿಸುತ್ತದೆ ಎಂದು ಕೊಡಗು ಜಿಲ್ಲಾ ಎನ್.ಎಸ್.ಎಸ್ ನೋಡಲ್ ಅಧಿಕಾರಿ ವನಿತ್ ಕುಮಾರ್ ಅಭಿಪ್ರಾಯ ಪಟ್ಟರು.
ಪೊನ್ನಂಪೇಟೆ ಸಮೀಪದ ಹಳಿಗಟ್ಟು ಸಿ.ಐ.ಟಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಹಳಿಗಟ್ಟು ಸ.ಹಿ.ಪಾ.ಶಾಲೆಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಅಧುನಿಕ ಯುಗದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಸಮುದಾಯದ ಶಿಕ್ಷಣದಿಂದ ವಿದ್ಯಾರ್ಥಿಗಳು ದೂರವಾಗುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್ ಹಿಡಿದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸಮುದಾಯದ ಜನರೊಂದಿಗೆ ಹೇಗೆ ಮಾತನಾಡಬೇಕು, ಮಾನವಿಯತೆಯನ್ನು ಹೇಗೆ ರೂಪಿಸಿಕೊಳ್ಳಬೇಕು, ಕೃಷಿ ಚಟುವಟಿಕೆ ತೊಡಗಿಕೊಳ್ಳುವುದು ಹೇಗೆ?, ಜನರ ಕಷ್ಟಗಳನ್ನು ಅರಿತು ಹೇಗೆ ಸಮಸ್ಯೆ ಬಗ್ಗೆ ಹರಿಸಬೇಕು ಎಂಬುದನ್ನು ತಿಳಿಯಲು ಎನ್.ಎಸ್.ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ 100 ಜನ್ಮ ದಿನದಂದು ಪಾರಂಭವಾದ ಈ ಯೋಜನೆ 6 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿ ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವದ ಗುಣಗಳನ್ನು ಬೆಳೆಸಲು ಶಿಬಿರಗಳು ಸಹಕಾರಿಯಾಗಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಸವರಾಜ್, ನೀವು ಬಯಸುವ ಬದಲಾವಣೆ ನೀವೆ ಆಗಬೇಕು. ಗಾಂಧಿಜೀಯ ಕನಸು ನೆನಸು ಮಾಡಲು ಯುವಜನರ ಮುಂದಾಗಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎನ್.ಎಸ್.ಎಸ್ ವ್ಯಕ್ತಿತ್ವ ಪರಿಪೂರ್ಣವಾಗುವಂತೆ ಮಾಡುತ್ತದೆ ಅದರ ಸದುಪಯೋಗ ನಿಮ್ಮಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರುವತೋಕ್ಲು ಗ್ರಾ.ಪಂ ಉಪಾಧ್ಯಕ್ಷ ಮನೆಯಪಂಡ ಪ್ರಾಣ್ ಬೋಪಣ್ಣ, ಪಿ.ಡಿ.ಓ ಶಂಕರ್ ನಾರಾಯಣ, ಸ.ಹಿ.ಪಾ.ಶಾಲೆಯ ಮುಖ್ಯ ಶಿಕ್ಷಕರಾದ ವೈ.ಎಸ್.ಕಾವೇರಿ, ಸ.ಹಿ.ಪಾ.ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಜೆ.ಎಂ.ನಿಷ್ಮ , ಸ.ಹಿ.ಪಾ.ಶಾಲೆಯ ಉಪಾಧ್ಯಕ್ಷರಾದ ಪೊನ್ನು, ರಾಜ್ಯ ಪ್ರಶಸ್ತಿ ಕೃಷಿಕ ಬಿ.ಪಿ.ರವಿಶಂಕರ್ , ಸಿ.ಐ.ಟಿ ಕ್ಯಾಂಪಸ್ ನಿರ್ವಾಹಕರಾದ ಜೀವನ್ ಚಿನ್ನಪ್ಪ, ಎನ್.ಎಸ್.ಎಸ್ ಅಧಿಕಾರಿಯಾದ ಪವನ್ ಕುಮಾರ್ ಎನ್, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶೈಲಾಜ ನೇರವೇರಿಸಿದರು. ವಿದ್ಯಾರ್ಥಿ ನಿರ್ಮಾಲ ಸ್ವಾಗತಿಸಿದರೆ, ಎನ್.ಎಸ್.ಎಸ್ ಅಧಿಕಾರಿ ಪವನ್ ಕುಮಾರ್ ವ0ದಿಸಿದರು.