ಮಡಿಕೇರಿ ಮಾ.9 NEWS DESK : ಜಿಂಕೆ ಡಿಕ್ಕಿಯಾದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ 8 ತಿಂಗಳ ಮಗು ಮೃತಪಟ್ಟ ಘಟನೆ ಶ್ರೀಮಂಗಲ ಬೀರುಗ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದ ಕೆಲಸಕ್ಕಾಗಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕರು ಶ್ರೀಮಂಗಲಕ್ಕೆ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಬೀರುಗ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಏಕಾಏಕಿ ಜಿಂಕೆಯೊಂದು ಅಡ್ಡ ಬಂದು ಆಟೋರಿಕ್ಷಾಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಪಲ್ಟಿಯಾಗಿದ್ದು, ತಾಯಿಯ ಮಡಿಲಿನಲ್ಲಿದ್ದ 8 ತಿಂಗಳ ಅನುರಾಗ್ ರಾಜ್ ಎಂಬ ಪುಟ್ಟ ಮಗು ರಿಕ್ಷಾದಡಿ ಸಿಲುಕಿ ಪ್ರಾಣ ಬಿಟ್ಟಿದೆ. ಈ ಘಟನೆ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಿಂಕೆ ಡಿಕ್ಕಿಯಾಗಿ ಆಟೋ ಮಗುಚಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಮಂಗಲ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆಟೋ ಮಗುಚಿ ಬಿದ್ದು ಮಗು ಸಾವನ್ನಪ್ಪಲು ಜಿಂಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಗುವನ್ನು ಕಳೆದುಕೊಂಡ ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.










