ಕುಶಾಲನಗರ NEWS DESK 14 : ಶರಣರ ಚಳುವಳಿ ನಡೆದು 900 ವರ್ಷಗಳು ಕಳೆದರೂ ಕೂಡ ಇಂದಿಗೂ ಮನುಕುಲದ ಉದ್ಧಾರಕ್ಕೆ ಸಾಧನವಾಗಿರುವ ವಚನ ಚಳುವಳಿ ಇಂದಿನ ಮನುಕುಲಕ್ಕೆ ಬಳುವಳಿಯಾಗಿದೆ ಎಂದು ಕುಶಾಲನಗರ ಪುರಸಭೆ ಸದಸ್ಯೆ ಜಯಲಕ್ಷ್ಮಿ ಬಣ್ಣಿಸಿದರು.
ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಗುರುಚನ್ನಬಸವ ಶಿವಾಚಾರ್ಯ ದತ್ತಿ ಕಾರ್ಯಕ್ರಮದಲ್ಲಿ “ಶರಣ ಸಾಹಿತ್ಯ ಪ್ರಸಾರ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಜನರಲ್ಲಿದ್ದ ಮೌಡ್ಯಗಳು, ಮೂಢನಂಬಿಕೆಗಳು ಮೊದಲಾದ ಕಂದಾಚಾರಗಳ ವಿರುದ್ಧ ಬಸವಾದಿ ಶರಣರು ಸಮರ ಸಾರುವ ಮೂಲಕ ಜನಸಮಾನ್ಯರ ಬವಣೆಗಳ ಊರುಗೋಲಾದರು ಎಂದು ವಿಶ್ಲೇಷಿಸಿದ ಜಯಲಕ್ಷ್ಮಿ , ವಚನಕಾರ್ತಿಯರಾದ
ಅಕ್ಕಮಹಾದೇವಿ, ಸತ್ಯಕ್ಕ, ಸಂಕವ್ವಾ ಮೊದಲಾದ ಶರಣೆಯ ಹೋರಾಟದ ಮಜಲುಗಳನ್ನು ವಿದ್ಯಾರ್ಥಿಗಳ ಮುಂದೆ ವಿವರಿಸಿದರು.
ರಂಗಕರ್ಮಿ, ಉಪನ್ಯಾಸಕ ಎಂ.ನಂಜುಂಡಸ್ವಾಮಿ ಮಾತನಾಡಿ, 12 ನೇ ಶತಮಾನದಲ್ಲಿ ಮೇಲು-ಕೀಳು, ಬಡವ – ಬಲ್ಲಿದ ಮೊದಲಾದ ಶೋಷಣೆಯುಕ್ತ ಪರಿಸರ, ಅಂದಿನ ಜನರ ನೆಮ್ಮದಿಯನ್ನು ಕಿತ್ತು ತಿನ್ನುತ್ತಿದ್ದಾಗ ಅವತಾರ ಪುರುಷನಂತೆ ಮೇಲೆದ್ದು ಬಂದು ಹೋರಾಟ ನಡೆಸಿ ದಮನಿತರ, ದೀನ ದಲಿತರ ನೋವಿಗೆ ಧ್ವನಿಯಾದ ಶರಣ ಚಳುವಳಿ ಈ ನಾಡು ಕಂಡ ಶ್ರೇಷ್ಠ ಚಳುವಳಿ ಎಂದರು.
ಇಂದಿನ ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತದಿಂದಲೇ ಬಸವಾದಿ ಶರಣರ ವಚನಗಳನ್ನು ಅರಿತು ಅದರ ಸಾರದಂತೆ ಬದುಕು ಕಟ್ಟಿದಾಗ ಕಲ್ಯಾಣ ರಾಜ್ಯದ ಕನಸು ನನಸಾಗಲಿದೆ ಎಂದರಲ್ಲದೇ, ಬಸವಣ್ಣ, ಒಬ್ಬ ವೈದ್ಯನಾಗಿ, ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಜನಮಾನಸದಲ್ಲಿ ಹೆಸರಾಗಿ ಉಸಿರಾದ ಬಗ್ಗೆ ನಂಜುಂಡಸ್ವಾಮಿ ವಿಶ್ಲೇಷಿಸಿದರು.
ದತ್ತಿ ಕಾರ್ಯಕ್ರಮ ಉದ್ಘಾಟಸಿದ ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಯ ಮಡಿಕೇರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವ ಮೂಲಕ ಅವರನ್ನು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶರಣ ಸಾಹಿತ್ಯ ಉತ್ತಮ ವೇದಿಕೆಯಾಗಿದೆ ಎಂದರು.
ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಬಸವರಾಜು ಸ್ವಾಗತಿಸಿ, ವಂದಿಸಿದರು.