ಮಡಿಕೇರಿ ಮಾ.14 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಭಾಗದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಹಲವು ವರ್ಷಗಳ ನಂತರ ಕರಡಿಗೋಡು ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಶಾಸಕ ಪೊನ್ನಣ್ಣ ಅವರು ದುಬಾರೆ ಸಾಕಾನೆ ಶಿಬಿರದ ಬುಡಕಟ್ಟು ನಿವಾಸಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಯೋಜನೆಯನ್ನು ಉದ್ಘಾಟಿಸಿದರು. ವಿದ್ಯುತ್ ಬೆಳಕಿಲ್ಲದೆ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದ ಸುಮಾರು 16 ಕುಟುಂಬಗಳಿಗೆ ಇದೀಗ ವಿದ್ಯುತ್ ಭಾಗ್ಯ ದೊರೆತ್ತಿದೆ.
::: ಪರಿಹಾರ ವಿತರಣೆ :::
ಪಾಲಿಬೆಟ್ಟದ ತೋಟವೊಂದರಲ್ಲಿ ಕಾಡಾನೆ ದಾಳಿಗೆ ಬಲಿಯಾದ ಅಸ್ಸಾಂ ಮೂಲದ ಮಹಿಳೆಯ ಕುಟುಂಬದ ಸದಸ್ಯರಿಗೆ ಇದೇ ಸಂದರ್ಭ ಶಾಸಕರು ಪರಿಹಾರದ ಚೆಕ್ ವಿತರಿಸಿದರು. ಅಲ್ಲದೆ ಮೃತದೇಹವನ್ನು ಅಸ್ಸಾಂ ಗೆ ಕೊಂಡೊಯ್ಯಲು ಬೇಕಾದ ಎಲ್ಲಾ ನೆರವು ಮತ್ತು ವ್ಯವಸ್ಥೆಗಳನ್ನು ಪೊನ್ನಣ್ಣನವರೇ ಮಾಡಿಕೊಟ್ಟರು.
ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮ ಗೋಪಾಲ, ಮಾಜಿ ಅಧ್ಯಕ್ಷ ಕೆ.ಕೆ.ಚಂದ್ರಕುಮಾರ್, ಮಾಜಿ ಉಪಾಧ್ಯಕ್ಷ ಎಂ.ಹೆಚ್.ಮೂಸ, ಸದಸ್ಯರಾದ ದೇವಿಯಾನಿ, ಪ್ರತೀಶ್, ತಾ.ಪಂ ಮಾಜಿ ಸದಸ್ಯ ಬಿಜಯ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.









