ನಾಪೋಕ್ಲು ಮಾ.16 NEWS DESK : ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದ ನೂತನ ಶ್ರೀ ಭಗವತಿ ದೇವಾಲಯದಲ್ಲಿ ದೇವರ ನೃತ್ಯಬಲಿ ಜರುಗುವುದರೊಂದಿಗೆ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವಕ್ಕೆ ತೆರೆ ಎಳೆಯಲಾಯಿತು. ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಒಂದು ವಾರಗಳ ಕಾಲ ನಡೆದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಗಣಪತಿ ಹೋಮ, ಮಹಾಬಲಿ, ಪೀಠ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹಾಪೂಜೆ, ವಿವಿಧ ದೈವಿ ಕಾರ್ಯಕ್ರಮಗಳು ಜರುಗಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಶಿಲೆಯಿಂದ ಪುನರ್ ನಿರ್ಮಾಣಗೊಂಡ ದೇವಾಲಯವು ಗ್ರಾಮದ ನೂತನ ಶ್ರದ್ಧಾಭಕ್ತಿಯ ದೈವಿಕ ತಾಣವಾಗಿ ರೂಪುಗೊಂಡಿತು. ಮರಕಡ ಶ್ರೀ ಗುರಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ದಿವ್ಯ ನೇತೃತ್ವದಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಬ್ರಹ್ಮ ಶ್ರೀ ಕೆ.ಯು.ಪದ್ಮನಾಭ ತಂತ್ರಿಗಳು, ದೇವಾಲಯದ ಮುಖ್ಯ ಅರ್ಚಕ ಶ್ರೀಕಾಂತ್ ವೈದಿಕ ಪೂಜಾ ವಿಧಿ ವಿಧಾನವನ್ನು ನೆರವೇರಿಸಿ ಕೊಟ್ಟರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ. ಮೇದಪ್ಪ ,ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ಚೌರಿರ ಉದಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇವರ ನೃತ್ಯಬಲಿ ನಡೆಯಿತು. (ವರದಿ : ದುಗ್ಗಳ ಸದಾನಂದ)










