ಸೋಮವಾರಪೇಟೆ ಮಾ.17 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಪ್ರಾರಂಭಿಸಿದ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ನಗರೋತ್ಥಾನ ಯೊಜನೆಯಡಿ ಅನುದಾನ ಒದಗಿಸಿದ್ದು, ಕಳೆದ ಒಂದೂವರೆ ವರ್ಷದ ಹಿಂದೆಯೇ ಅಂದಿನ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇಂದಿಗೂ ಕೆಲವು ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಎಂದು ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯ ಗುತ್ತಿಗೆ ಪಡೆದು ಸೋಮವಾರಪೇಟೆಯ ಗುತ್ತಿಗೆದಾರನಿಗೆ ತುಂಡು ಗುತ್ತಿಗೆ ನೀಡಿದ್ದಾರೆ. ಆದರೆ, ಇವರು ಕಾಮಗಾರಿಯನ್ನು ಮಾಡಿಲ್ಲ. ಕರ್ಕಳ್ಳಿ ಗ್ರಾಮದಲ್ಲಿ ಉದ್ಯಾನವನ ನಿರ್ಮಿಸುವ ನೆಪದಲ್ಲಿ ಕೆರೆಯೊಳಗೆ ತ್ಯಾಜ್ಯ ವಸ್ತುಗಳನ್ನು ತುಂಬಿ ದುರ್ವಾಸನೆ ಬರುವಂತೆ ಮಾಡಿದ್ದಾರೆ. ಕೆಲವೆಡೆ ಕಾಮಗಾರಿಗಾಗಿ ಭೂಮಿ ಅಗೆದು ಹಾಕಿ ವರ್ಷವಾಗುತ್ತಾ ಬಂದರೂ ಕೆಲಸ ಆರಂಭಿಸಿಲ್ಲ ಎಂದು ದೂರಿದ್ದಾರೆ.
ಹಣ ವಿನಿಯೋಗವಾಗದೆ ಆರ್ಥಿಕ ವರ್ಷಾಂತ್ಯಕ್ಕೆ ಸರ್ಕಾರಕ್ಕೆ ವಾಪಾಸ್ ಹೋಗುವ ಸಾಧ್ಯತೆ ಇದೆ. ಮುಂದಿನ ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸಿ, ಮಳೆಗಾಲದ ಒಳಗೆ ಮುಗಿಸಬೇಕು. ತಪ್ಪಿದಲ್ಲಿ ಪಟ್ಟಣ ಪಂಚಾಯಿತಿ ಕಛೇರಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದೀಪಕ್ ಎಚ್ಚರಿಕೆ ನೀಡಿದ್ದಾರೆ.
ಮನವಿಯನ್ನು ತಾಲ್ಲೂಕು ಕಚೇರಿಯ ಶಿರಸ್ತೆದಾರ್ ಕೆ.ರಮೇಶ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ನೀಡಿದರು. ಈ ಸಂದರ್ಭ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಜಗನ್ನಾಥ್, ಸಂಚಾಲಕ ನಿತಿನ್ ಮಿಟ್ಟು, ಸಹ ಸಂಚಾಲಕ ಶೇಖರ್ ಇದ್ದರು.










