ಮಡಿಕೇರಿ ಮಾ.18 NEWS DESK : ಇದೇ ಮಾ.3 ರಂದು ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸಂದರ್ಭ ರೋಟರಿ ಮಡಿಕೇರಿ ಸಂಸ್ಥೆಯು ಮಡಿಕೇರಿಯ 31 ಕೇಂದ್ರಗಳಲ್ಲಿ 160 ಪೋಲಿಯೋ ಸ್ವಯಂಸೇವಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯಿತು.
ಜಿಲ್ಲಾ ಆರೋಗ್ಯ ಇಲಾಖೆ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ರೋಟರಿ ಅಧ್ಯಕ್ಷ ರೋ.ಎನ್.ಡಿ.ಅಚ್ಚಯ್ಯ ಅವರು ಆರೋಗ್ಯ ಇಲಾಖೆಯ ಸಿಬ್ಬಂದಿ ದಿವ್ಯ ಅವರ ನೆರವಿನೊಂದಿಗೆ ಊಟವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
31 ಕೇಂದ್ರಗಳಿಗೆ ಆಹಾರ ಪೂರೈಸಲು ಸಾರಿಗೆ ವ್ಯವಸ್ಥೆ ಸಹಿತ ಸಹಕಾರ ನೀಡಿದ ಹೊಟೇಲ್ ಉಡುಪಿ ವೆಜ್ ನ ಮಾಲೀಕ ಶಂಕರ ಪೂಜಾರಿ ಅವರಿಗೆ ಅಚ್ಚಯ್ಯ ಅವರು ಧನ್ಯವಾದಗಳನ್ನು ಅರ್ಪಿಸಿದರು.
ವಿಶ್ವ ವ್ಯಾಪಿ ಪೋಲಿಯೋ ನಿರ್ಮೂಲನೆಗೆ ರೋಟರಿ ಸಂಸ್ಥೆ ದೊಡ್ಡ ಮಟ್ಟದ ಶ್ರಮದಾನವನ್ನು ಮಾಡಿದ್ದು, ಸಂಸ್ಥೆಯ ಸಾಮಾಜಿಕ ಕಳಕಳಿ ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಹೇಳಿದರು.









