ಮಡಿಕೇರಿ ಮಾ.19 NEWS DESK : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಘಟಕ, ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಸಮಿತಿ ಹಾಗೂ ಯುವಸ್ಪಂದನ, ಬೆಂಗಳೂರು ನಿಮಾನ್ಸ್ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ “ಜೀವನ ಕೌಶಲ್ಯ ತರಬೇತಿ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಉದ್ಘಾಟಿಸಿ, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬೆಂಗಳೂರು ನಿಮಾನ್ಸ್ ನ ಜೀವನ ಕೌಶಲ್ಯ ತರಬೇತಿ ಮತ್ತು ಆಪ್ತ ಸಮಾಲೋಚನಾ ಸೇವೆಗಳ ವಿಭಾಗದ ಸಂಯೋಜನಾಧಿಕಾರಿ ಆರ್.ಎನ್.ಶ್ರೀವಿದ್ಯಾ ಮಾತನಾಡಿ, ಇಂದಿನ ಯುವ ಜನಾಂಗವು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಸಾಮಾಜಿಕ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತರವುದರೊಂದಿಗೆ, ವ್ಯಕ್ತಿಗಳ ಭಾವನೆಗಳು ಮತ್ತು ಒತ್ತಡಗಳ ನಿರ್ವಹಣೆಯಿಂದ ಸುಂದರ ಬದುಕಿನ ನಿರ್ಮಾಣ ಸಾಧ್ಯ ಎಂದು ಹಲವಾರು ಚಟುವಟಿಕೆಗಳ ಉದಾಹರಣೆಯೊಂದಿಗೆ ತಿಳಿಸಿಕೊಟ್ಟರು.
ನಿಮಾನ್ಸ್ ಆಪ್ತ ಸಮಾಲೋಚನಾ ಸೇವೆಗಳ ಸಹಾಯಕರಾದ ಸೌಜನ್ಯ ಮಾತನಾಡಿ, ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿರುವ ಯುವ ಸ್ಪಂದನ ವೇದಿಕೆಯ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಆಪ್ತ ಸಮಾಲೋಚನೆಯ ಅವಶ್ಯಕತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆರ್.ದಿವ್ಯ, ಮಾನವ ಹಕ್ಕುಗಳ ಸಮಿತಿಯ ಸಂಚಾಲಕರು, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಂ.ಬಿ.ದಿವ್ಯ ಹಾಜರಿದ್ದರು. ನಿರೂಪಣೆಯನ್ನು ಅಜಿತ್ ನಡೆಸಿಕೊಟ್ಟರು. ತೃತೀಯ ಬಿ.ಎ.ವಿದ್ಯಾರ್ಥಿಗಳಾದ ಚೇತನ್ ಸ್ವಾಗತಿಸಿದರು. ಮಂಜುಳ ವಂದಿಸಿದರು.