ವಿರಾಜಪೇಟೆ ಮಾ.19 NEWS DESK : ವಿರಾಜಪೇಟೆ ಸಮೀಪದ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು.
ಕುಂದಿರ ಮನೆಯಿಂದ ಭಂಡಾರ ಬಂದು ದೇಗುಲದಲ್ಲಿ ಕೊಡಿಮರದ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು. ನಾಗದೇವಾಲಯದಲ್ಲಿ ವಿಶೇಷ ಪೂಜೆ ನಂತರ ಅನ್ನದಾನ ನಡೆಯಿತು. ರಾತ್ರಿ ಇರ್ ಬೊಳಕ್ ಮಾಹಾಪೂಜೆ ನಡೆಯಿತು.
ಇಂದು ಮಧ್ಯಾಹ್ನ ನೆರಪು, ಎತ್ತ್ ಪೊರಾಟ್, ತೆಂಗಿನಕಾಯಿ ಗೆ ಗುಂಡು ಹೊಡೆಯುವುದು , ನಂತರ ಶ್ರೀ ದೇವರಿಗೆ ಮಾಹಾ ಪೂಜೆ ಸಲ್ಲಿಸಲಾಯಿತು.
ಸಂಜೆ ಶ್ರೀ ಮಲೆ ಮಹಾದೇಶ್ವರ ದೇವರ ಉತ್ಸವ ಮೂರ್ತಿ( ತಡಂಬು) ನಗರ ಪ್ರದಕ್ಷಿಣೆ ನಡೆಯಿತು.
ನಗರದ ತೆಲುಗರ ಬೀದಿ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ( ಗೌರಿ ದೇವಸ್ಥಾನ) ದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಯಿತು. ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಲಘು ಉಪಹಾರ ಕಾರ್ಯಕ್ರಮ ನಡೆಯಿತು. ಮುಖ್ಯ ಬೀದಿಗಾಗಿ ಸಂಚರಿಸಿ ಬಳಿಕ ರಾಂ ಲಾಲ್ ( ಸತ್ಯ ನಾರಾಯಣ ಕಾಂಪ್ಲೆಕ್ಸ್) ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಂಗ ಬೀದಿಯ ( ವರ್ಷದಲ್ಲಿ ಒಂದು ದಿನ ಮಾತ್ರ ದರ್ಶನ ಭಾಗ್ಯ ಕರುಣಿಸುವ ) ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯ ಬೀದಿಗಾಗಿ ಮಲೆ ಮಹಾದೇಶ್ವರ ದೇಗುಲಕ್ಕೆ ಹಿಂದುರುಗಿತು.
ಶ್ರೀ ದೇವರ ಪೇಟೆ ಆಗಮನ ಅಂಗವಾಗಿ ಮುಖ್ಯ ಬೀದಿಗಳು ಸೇರಿದಂತೆ ಬಸವೇಶ್ವರ ದೇವಾಲಯ ಹಾಗೂ ಶ್ರೀ ಮಹಾಲಕ್ಷ್ಮಿ ದೇವಾಲಯವನ್ನು ವಿದ್ಯುತ್ ಗಳಿಂದ ಅಲಂಕರಿಸಲಾಗಿತ್ತು.
ಕೇರಳದ ಚೆಂಡೆ ವಾದ್ಯ ಮತ್ತು ಕೊಡಗಿನ ಸಾಂಪ್ರದಾಯಕ ಓಲಗ ದೇವರ ಮೆರವಣಿಗೆಗೆ ಮೆರುಗು ನೀಡಿದವು .ಶ್ರೀ ದೇವರ ಮೆರವಣಿಗೆಗೆ ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ. ರಸ್ತೆ ಮುಖ್ಯ ಬೀದಿ, ದೇವಾಂಗ ಬೀದಿ, ಶ್ರೀ ಮಹಾಗಣಪತಿ ದೇಗುಲದ ಸನೀಹದ ರಾಂ ಲಾಲ್ ಅವರ ಸ್ಥಳದಲ್ಲಿ ಭಕ್ತರಿಂದ ಶ್ರೀ ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಲಾಯಿತು.
ದೇವಾಲಯದ ತಕ್ಕ ಮುಖ್ಯಸ್ಥರು, ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಗ್ರಾಮಗಳ ಗ್ರಾಮಸ್ಥರು, ಪ್ರಮುಖರು, ಶ್ರೀ ಬಸವೇಶ್ವರ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವರದಿ :ಕಿಶೋರ್ ಕುಮಾರ್ ಶೆಟ್ಟಿ