ಮಡಿಕೇರಿ ಮಾ.19 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರು, ವಿಕಲಚೇತನರು ಸೇರಿದಂತೆ ಯಾರೂ ಸಹ ಮತದಾನದಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಅಂಚೆ ಮತಪತ್ರಗಳ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಚೆ ಮತಪತ್ರ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅಂಚೆ ಮತಪತ್ರವನ್ನು ಆನ್‍ಲೈನ್ ಮೂಲಕ ನಮೂನೆ 12 ಡಿ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
85 ವರ್ಷ ಮೇಲಿನವರಿಗೆ, ವಿಕಲಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಧ್ಯವಾದಷ್ಟು ಮತಗಟ್ಟೆ ಕೇಂದ್ರಗಳಿಗೆ ಹೋಗಿ ಮತಹಕ್ಕು ಚಲಾಯಿಸುವಂತಾಗಬೇಕು. ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿರುವವರಿಗೆ ಅಂಚೆ ಮತಪತ್ರದ ಮೂಲಕ ಮತಹಕ್ಕು ಚಲಾಯಿಸಬಹುದಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ, ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಈ ವಿಷಯವನ್ನು ಮತದಾರರಿಗೆ ಮನವರಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ದಿನಾಂಕದೊಳಗೆ ಅಂಚೆ ಮತಪತ್ರ ವಿತರಿಸಿ ಮತ್ತು ದೃಢೀಕರಣ ಪತ್ರ ಪಡೆಯಬೇಕು. ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
85 ವರ್ಷ ಮೇಲ್ಪಟ್ಟವರು ಹಾಗೂ ಶೇ.40 ರಷ್ಟು ವಿಕಲತೆ ಹೊಂದಿರುವ ಮತದಾರರ ವಿವರವನ್ನು ಒಳಗೊಂಡ ಪಟ್ಟಿ ಬಗ್ಗೆ ಗಮನಹರಿಸಬೇಕು. ಸೆಕ್ಟರ್ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನಮೂನೆ-12 ಡಿ ಅನ್ನು ವಿತರಣೆ ಮಾಡಲು ಅಗತ್ಯ ಕ್ರಮವಹಿಸಬೇಕು. ನಮೂನೆ ವಿತರಣೆ ಮಾಡಿರುವ ಅಂಕಿ ಅಂಶಗಳ ಮಾಹಿತಿಯನ್ನು ನೀಡಬೇಕು ಎಂದರು. ವಿತರಿಸಲಾದ ಅಂಚೆ ಮತಪತ್ರಗಳನ್ನು ಆದಷ್ಟು ತ್ವರಿತವಾಗಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಅಗತ್ಯ ಸೇವೆಗಳ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ಸುಮಾರು 12 ಇಲಾಖೆಗಳು ಬರಲಿದ್ದು, ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಅಂಚೆ ಮತಪತ್ರದ ಪಟ್ಟಿ ಕಳುಹಿಸಲಾಗಿದೆ. ಹಾಗೆಯೇ 85 ವರ್ಷ ಮೇಲ್ಪಟ್ಟವರು 5 ಸಾವಿರಕ್ಕೂ ಹೆಚ್ಚು ಹಾಗೂ ವಿಕಲಚೇತನರು 4 ಸಾವಿರ ಮಂದಿ ಇದ್ದಾರೆ ಎಂದು ತಿಳಿಸಿದರು.
ಅಂಚೆ ಮತಪತ್ರ ನೋಡಲ್ ಅಧಿಕಾರಿ ಅನಿತಾ ಭಾಸ್ಕರ್, ಎನ್‍ಐಸಿಯ ಅಜಿತ್ ಅವರು ಅಂಚೆ ಮತಪತ್ರ ಬಗ್ಗೆ ಹಲವು ಮಾಹಿತಿ ನೀಡಿದರು. ಕೆ.ಸಿ.ದಯಾನಂದ, ವಿಜಯ್, ನಾಗರಾಜ ಆಚಾರ್, ಸಂಜಯ್ ಕುಮಾರ್, ಇತರರು ಇದ್ದರು.