ಕುಶಾಲನಗರ, ಮಾ 22 NEWS DESK : ಕರ್ನಾಟಕದ ಕಾರವಾರ ನೌಕಾನೆಲೆಯ 13 ಅಧಿಕಾರಿಗಳ ತಂಡ ಕೊಡಗಿನ ಸೈನಿಕ ಶಾಲೆಗೆ ಭೇಟಿ ನೀಡಿತು.
ಶಾಲೆಗೆ ಆಗಮಿಸಿದ ಅಧಿಕಾರಿಗಳು ಸೈನಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಭಾರತೀಯ ನೌಕಾ ಇಲಾಖೆಯಲ್ಲಿ ಅಧಿಕಾರಿಗಳಾಗಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವಂತ ಸಲಹೆ ನೀಡಿದರು.
ಕಾರವಾರದ ನೌಕಾನೆಲೆಯ ಉಪ ನೆಲೆ ವಿಕ್ಚುವಲಿಂಗ್ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಜೆ ಸುಬ್ಬಯ್ಯ ಮಾತನಾಡಿ, ತಮ್ಮ ವಿದ್ಯಾಭ್ಯಾಸ ಮತ್ತು ಕರ್ತವ್ಯಕ್ಕೆ ಬದ್ಧರಾಗಿ ತಮ್ಮ ಭವಿಷ್ಯವನ್ನು ಭಾರತೀಯ ಸೇನೆಯಲ್ಲಿ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕೆಂದರು. ಹಾಗೆಯೇ ತಮ್ಮ ಈ ರ‍್ಯಾಲಿಯ ಉದ್ದೇಶ ಹಾಗೂ ನೌಕಾ ಸೇನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಈ ರ‍್ಯಾಲಿಯ ಮಹತ್ವವನ್ನು ಕುರಿತು ಪರಿಚಯಿಸಿದರು. ಇದರೊಂದಿಗೆ ಭಾರತೀಯ ನೌಕಾ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಇರುವ ವಿವಿಧ ವೃತ್ತಿಪರ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಕಮಾಂಡರ್ ಸಜ್ವಾನ್ ಕೋಕಿಲಾ ಮಾತನಾಡಿ, ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಗಳಾಗಿ ಸೇರಲು ಮಹಿಳೆಯರಿಗೆ ಲಭ್ಯವಿರುವ ಹೆಚ್ಚಿನ ಅವಕಾಶಗಳ ಕುರಿತು ಮಾತನಾಡಿದರು.
ಲೆಫ್ಟಿನೆಂಟ್ ಆವಂತಿಕಾ ಅವರು ಐಎನ್‌ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಸಹಾಯಕ ಲಾಜಿಸ್ಟಿಕ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಪಡೆದ ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು, ಇದು ಶಾಲೆಯ ವಿದ್ಯಾರ್ಥಿನಿಯರು ಭಾರತೀಯ ಸಶಸ್ತ್ರ ಪಡೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಭಾರತೀಯ ನೌಕಾಪಡೆಯಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿತು.
ಸೈನಿಕ ಶಾಲೆಯ ಕೊಡಗಿನ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರ‍್ಯಾಲಿಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಆತ್ಮೀಯ ಸ್ವಾಗತವನ್ನು ನೀಡಿದರು. ಅಲ್ಲದೆ ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಭವಿಷ್ಯವನ್ನು ರೂಪಿಸುವಲ್ಲಿ ಇಂತಹ ಸಂವಾದಗಳು ಅವಶ್ಯವಾಗಿವೆ ಎಂದು ಹೇಳಿದರು.
ಕರ್ನಲ್ ಅಮರ್ ಜೀತ್ ಸಿಂಗ್, ಕಮಾಂಡರ್ ಎಸ್ ಎಸ್ ಪಿ ಸಿಂಗ್, ಕಮಾಂಡರ್ ರವೀಂದ್ರ ಕುಮಾರ್ ನಡುವೆ ಸೌಹಾರ್ಧ ಭೇಟಿಯ ದ್ಯೋತಕವಾಗಿ ಪರಸ್ಪರ ಸ್ಮರಣಿಕೆಗಳ ವಿನಿಮಯ ಮಾಡಿಕೊಳ್ಳಲಾಯಿತು.
ಈ ಭೇಟಿಯು ‘ಕರ್ನಾಟಕ ಪರಂಪರೆಯ ರ‍್ಯಾಲಿ’ಯ ಭಾಗವಾಗಿದ್ದು, ಇದು ಭಾರತೀಯ ನೌಕಾ ಸೇನೆಯನ್ನು ಪ್ರಚುರಪಡಿಸುವ ಮತ್ತು ಭಾರತೀಯ ನೌಕಾಪಡೆಯ ಶ್ರೀಮಂತ ಇತಿಹಾಸವನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. 1961 ರಲ್ಲಿ ಅಂಜದೀಪ್ ದ್ವೀಪವನ್ನು ವಶಪಡಿಸಿಕೊಂಡದ್ದು ಹಾಗೂ 1971 ರ ಯುದ್ಧದ ಸಂದರ್ಭದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಪ್ರಾಮುಖ್ಯತೆಯನ್ನು ಸಾರುವುದಾಗಿತ್ತು. ಈ ಘಟನೆಯು ರಾಷ್ಟ್ರದ ನೌಕಾ ಸೇನೆಯ ಪರಂಪರೆಯಲ್ಲಿ ಹೆಮ್ಮಯ ಮೈಲಿಗಲ್ಲನ್ನು ಸೃಷ್ಠಿಸುವ ಗುರಿಯನ್ನು ಹೊಂದಿದೆ.