ಮಡಿಕೇರಿ ಮಾ.22 NEWS DESK : ಪ್ರತಿಯೊಬ್ಬರಿಗೂ ನೀರಿನ ಮಹತ್ವ ತಿಳಿದಿದೆ ಮತ್ತು ನೀರಿಲ್ಲದಿದ್ದರೆ ಭೂಮಿಯ ಮೇಲೆ ಯಾವುದೇ ಜೀವಿಯು ಬದುಕಲಾರದು. ಭೂಮಿಯ ಮೇಲೆ ನೀರು ಅತ್ಯವಶ್ಯಕವಾಗಿದೆ. ಹಾಗಾಗಿ ನೀರಿನ ಮಹತ್ವವನ್ನು ಅರಿಯಲು ಮತ್ತು ಅದರ ಸಂರಕ್ಷಣೆ ಮಾಡುವ ಕುರಿತು ಜನಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 22 ಅನ್ನು ವಿಶ್ವ ಜಲ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
“ಶಾಂತಿಗಾಗಿ ನೀರು” ಎಂಬುದು 2024 ರ ವಿಶ್ವ ಜಲ ದಿನದ ಮುಖ್ಯ ಘೋಷಣೆ (ಥೀಮ್) ಯಾಗಿದೆ. ನೀರು ನಮ್ಮ ಶಾಂತಿಗೆ ಕಾರಣವಾಗಬೇಕೇ ಹೊರತು ಎಂದೂ ಕೂಡ ಸಂಘರ್ಷಕ್ಕೆ ಕಾರಣವಾಗಬಾರದು. ನಾವು ನೀರನ್ನು ಪರಸ್ಪರ ಸಹಕಾರ ತತ್ವದಡಿ ಕೊಟ್ಟು ತೆಗೆದುಕೊಳ್ಳುವ ಸಕಾರಾತ್ಮಕ ಮನೋಭಾವ ಹೊಂದಿ ಸಾಮರಸ್ಯ ಬೆಳೆಸಿಕೊಳ್ಳಬೇಕು ಎಂಬುದು ಈ ವರ್ಷದ ಉದ್ದೇಶವಾಗಿದೆ.
1993 ರಿಂದ ಪ್ರತಿವರ್ಷ ಈ ದಿನವನ್ನು ಆಚರಿಸುವ ಮೂಲಕ ಜನರಲ್ಲಿ ನೀರಿನ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ.
ನಾವು ಅಂತರ್ಜಲವನ್ನು ವೃದ್ಧಿಸಲು ಕ್ರಮಕೈಗೊಳ್ಳಬೇಕು. ಜಲ ಮಾಲಿನ್ಯವನ್ನು ತಡೆಗಟ್ಟುವ ದಿಸೆಯಲ್ಲಿ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ. ನಾವು ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸದಿದ್ದಲ್ಲಿ ಭವಿಷ್ಯದಲ್ಲಿ ಜಲಕ್ಷಾಮ ಉಂಟಾಗಿ ನಾವು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಜಾಗತಿಕ ತಾಪಮಾನದಿಂದ ನಾವು ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದು ಜಲಕ್ಷಾಮದ ಎಚ್ಚರಿಕೆಯ ಗಂಟೆಯನ್ನು ನೀಡಿದೆ.
ಈ ಗ್ರಹದಲ್ಲಿ ಎಲ್ಲಾ ಜೀವಿಗಳ ಜೀವನವನ್ನು ವ್ಯಾಖ್ಯಾನಿಸುವ ಒಂದು ವಿಷಯವೆಂದರೆ ಅದು ನೀರು ಮಾತ್ರ. ವಿಶ್ವ ಜಲದಿನದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ನೀರಿನ ಸಂರಕ್ಷಣೆಗೆ ಪಣತೊಡಬೇಕಿದೆ. ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ಉಳಿಸಲು ಎಚ್ಚರಗೊಳ್ಳುವ ಮತ್ತು ನೀರನ್ನು ಉಳಿಸುವ ಸಮಯ ಇದು.
ಭಾರತದಲ್ಲಿ ನೀರನ್ನು ದೇವ ಸ್ವರೂಪಿಯಂತೆ ಪೂಜಿಸಲಾಗುತ್ತದೆ. ಜಲ ಮೂಲಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಶುದ್ಧ ನೀರು ಸಿಗಬೇಕು. ನೀರು ಸ್ವಚ್ಛ ಮತ್ತು ಶುದ್ಧವಾಗಿರಬೇಕೆಂಬುದೇ ಈಗಿನ ಪ್ರಮುಖ ಧ್ಯೇಯವಾಗಿದೆ.
ನೈಸರ್ಗಿಕ ಸಂಪನ್ಮೂಲವಾದ ನೀರಿನ ಸಂರಕ್ಷಣೆ ಇಂದು ನಮಗೆ ಅತಿ ಮುಖ್ಯವಾಗಿದೆ. ಏಕೆಂದರೆ ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿದೆ. ಆದ್ದರಿಂದ ನಾವು ನೀರನ್ನು ಅನಗತ್ಯವಾಗಿ ಪೋಲು ಮಾಡದೇ ಭವಿಷ್ಯತ್ತಿಗಾಗಿ ನೀರನ್ನು ಮಿತವಾಗಿ ಬಳಕೆ ಮಾಡಬೇಕು.
ಮೊದಲ ವಿಶ್ವ ಜಲ ದಿನವನ್ನು ಮಾರ್ಚ್ 22, 1993 ರಂದು ಆಚರಿಸಲಾಯಿತು. ಇದು ಮನುಕುಲದ ಉಳಿವು ಸೇರಿದಂತೆ ಇಡೀ ಜೀವಮಂಡಲದ ಜೀವಿಗಳ ರಕ್ಷಣೆಯ ಮಹತ್ವದ ದಿನವಾಗಿದೆ.
ಈ ದಿಸೆಯಲ್ಲಿ ನಾವು ನಾಳಿನ ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆ ಹಾಗೂ ನೀರಿನ ಮಿತ ಬಳಕೆಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.
ವಿಶ್ವ ಜಲ ದಿನವು ಜಲ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಹಾಗೂ ಭವಿಷ್ಯತ್ತಿನ ದೃಷ್ಠಿಯಿಂದ ಪ್ರಮುಖ ದಿನವಾಗಿದೆ. ನಾಳಿನ ಉತ್ತಮ ಭವಿಷ್ಯಕ್ಕಾಗಿ ‘ಹನಿ ಹನಿ ನೀರು ಉಳಿಸಿ, ಜೀವ ಉಳಿಸಿ’ ಎಂಬ ಘೋಷಣೆ ಮೂಲಕ ನಾವು ನೀರಿನ ಸಂರಕ್ಷಣೆ ಮಾಡಬೇಕಿದೆ.
ನಿಸರ್ಗದತ್ತವಾಗಿ ದೊರೆಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸಿ ಜನಜಾಗೃತಿ ಮೂಡಿಸುವ ಸಲುವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಜಲ ದಿನವನ್ನು ಪ್ರತಿ ದಿನ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ.
ಭೂಮಿಯ ಶೇ.70 ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವ ನೀರಿನಲ್ಲಿ ಕುಡಿಯಲು ಹಾಗೂ ದಿನ ಬಳಕೆಗೆ ಯೋಗ್ಯವಾಗಿರುವುದು (ಸಿಹಿ ನೀರು) ಕೇವಲ ಶೇ. 1 ರಿಂದ 2 ರಷ್ಟು ಮಾತ್ರ ಎಂಬುದು ಅಚ್ಚರಿಯ ಸಂಗತಿ. ಈ ಯೋಗ್ಯ ನೀರಿನಲ್ಲಿ ಶೇ.1 ರಷ್ಟು ಧ್ರುವ ಪ್ರದೇಶಗಳ ಹಿಮ ಮತ್ತು ನೀರ್ಗಲ್ಲುಗಳ ರೂಪದಲ್ಲಿ ಕಂಡುಬರುತ್ತದೆ.
ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ನೀರಿಗೆ ಸಂಬಂಧಿಸಿದಂತೆ ಮುಂದೊಂದು ದಿನ ನೀರಿಗಾಗಿ ಮೂರನೇ ಮಹಾಯುದ್ಧ ಘಟಿಸಬಹುದು ಎಂಬುದು ಜಲತಜ್ಞರ ಅಭಿಪ್ರಾಯವಾಗಿದೆ.
ನೀರನ್ನು ನಾವು ದುಡ್ಡಿನ ರೀತಿಯಲ್ಲಿ ನಾವು ವೈಯಕ್ತಿಕವಾಗಿ ನೀರನ್ನು ಭವಿಷ್ಯಕ್ಕಾಗಿ ಶೇಖರಿಸಿಡಲು ಸಾಧ್ಯವಿಲ್ಲ. ಅಂದರೆ ನಾವು ನೀರನ್ನು ಪೋಲು ಮಾಡಬಾರದು. ಆದ್ದರಿಂದ ನಾವು ನೀರನ್ನು ಜಾಣ್ಮೆ ಮತ್ತು ವಿವೇಕತನದಿಂದ ಮಿತ ಬಳಕೆ ಮಾಡಬೇಕಿದೆ. ಅಂದರೆ ಎಲ್ಲರೂ ಪ್ರತಿಹಂತದಲ್ಲೂ ನೀರನ್ನು ಅತಿ ಎಚ್ಚರಿಕೆಯಿಂದ ಬಳಸಬೇಕು.
ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಇಂದು ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ನಮ್ಮ ದೇಶದಲ್ಲಿ ಜನಸಂಖ್ಯೆ ಏರಿದಂತೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಆದರೆ ನೀರಿನ ಬಳಕೆಯ ಮೊತ್ತವೂ ಹೆಚ್ಚುತ್ತಿದೆ. ಉದ್ಯಮಕ್ಕೆ, ಕೃಷಿಗೆ, ಮಾಲಿನ್ಯ ನಿವಾರಣೆ, ಇತ್ಯಾದಿ ಕೆಲಸಗಳಿಗೆ ನೀರಿನ ಬೇಡಿಕೆ ದಿನವೂ ಹೆಚ್ಚುತ್ತಿದೆ..
ಪಶ್ಚಿಮಘಟ್ಟ ಪ್ರದೇಶದಲ್ಲಿ 2-3 ದಶಕಗಳ ಹಿಂದೆ ಐದಾರು ತಿಂಗಳು ಕಾಲ ಸತತ ಮಳೆಯಾಗುತ್ತಿದ್ದ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕ್ಷೀಣಿಸಿದೆ. ಇದರಿಂದ ಬೇಸಿಗೆಯಲ್ಲಿ ಕೊಡಗಿನ ಹಳ್ಳ-ಕೊಳ್ಳಗಳು, ಜಲಧಾರೆಗಳು, ಕೆರೆಕಟ್ಟೆಗಳು ಬತ್ತುತ್ತಿವೆ. ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ಈ ವರ್ಷ ತೀವ್ರವಾಗಿ ಕ್ಷೀಣಿಸಿರುವುದನ್ನು ನಾವು ಗಮನಿಸಬಹುದಾಗಿದೆ.
ಈ ಬಾರಿ ಬೇಸಿಗೆಯ ಆರಂಭದಲ್ಲೇ ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಾ ಬಂದಿದೆ. ಕಾವೇರಿ ನದಿಯಲ್ಲಿ ನೀರು ಕ್ಷೀಣಗೊಂಡಲ್ಲಿ ಭವಿಷ್ಯತ್ತಿನಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿರುವ ಪರಿಸ್ಥಿತಿ ಬಂದಿದೆ. ಕೊಡಗಿನಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಜನರಿಗೆ ಟ್ಯಾಂಕರ್‌ಗಳ ಮೂಲಕ ಮನೆ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಕುಡಿಯುವ ನೀರಿಗಾಗಿ ಜನರು ಪರಿತಪಿಸುವ ದುಃಸ್ಥಿತಿ ಬಂದಿರುವುದು ದುದೈರ್ವದ ಸಂಗತಿಯಾಗಿದೆ.
ನದಿ ನೀರು ಕ್ಷೀಣ : ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ತೀವ್ರವಾಗಿ ಕ್ಷೀಣಿಸಿದಂತೆ ಜೀವನದಿ ಕಾವೇರಿ ಒಡಲಿನಲ್ಲಿ ಅಂತರ್ಜಲ ಕುಗ್ಗಿದ್ದು ನದಿಯ ನೀರಿನ ಮಟ್ಟ ಕ್ಷೀಣಿಸುತ್ತಿದೆ.
ನದಿಯಲ್ಲಿ ಅವೈಜ್ಞಾನಿಕ ಮರಳು ಗಣಿಗಾರಿಕೆ ಮತ್ತು ನದಿ ಪಾತ್ರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಹಾಗೂ ಚರಂಡಿಯ ಕೊಳಚೆ ನೀರು ನದಿ ಸೇರುತ್ತಿರುವುದು ಕೂಡ ನದಿ ಕಲುಷಿತಗೊಳ್ಳಲು ಕಾರಣವಾಗಿದೆ.
ಹಿಂದಿನ ದಶಕಗಳಲ್ಲಿ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದ್ದ ಬಾವಿಗಳು ಇಂದು ಕಸದ ಗುಂಡಿಗಳಾಗಿ ಮಾರ್ಪಟ್ಟಿವೆ. ನಾಡಿನ ಜೀವನಾಡಿಗಳಾಗಿದ್ದ ಕೆರೆಕಟ್ಟೆಗಳು ಇಂದು ಅಭಿವೃದ್ಧಿ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಈ ಎಲ್ಲಾ ಅವ್ಯವಸ್ಥೆಗೆ ಮನುಷ್ಯನ ದುರಾಸೆ ಕಾರಣವಾಗಿದೆ. ಈ ಪರಿಸ್ಥಿತಿಯನ್ನು ನಾವು ಸುಧಾರಿಸಲೇ ಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗಲಿದೆ. ಪ್ರಸ್ತುತ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಮನಗಂಡು ನೀರನ್ನು ಪ್ರಜ್ಞೆಯಿಂದ ಬಳಸಬೇಕು. “ಒಂದೊಂದು ಹನಿ ನೀರನ್ನೂ ನಾಳಿನ ಉತ್ತಮ ಭವಿಷ್ಯಕ್ಕಾಗಿ ಉಳಿಸಿ ಜೀವಜಲವನ್ನು ಸಂರಕ್ಷಿಸಬೇಕು. ಹನಿ ಹನಿ ನೀರನ್ನು ಉಳಿಸಲು ತನ್ಮೂಲಕ ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸಲು ನಾವು ಪಣತೊಡಬೇಕಿದೆ.”
ನಾವೀಗ ಎದುರಿಸುತ್ತಿರುವ ಶುದ್ಧ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ನೀರಿನ ಮಿತಬಳಕೆ ಹಾಗೂ ನೀರಿನ ಸಂರಕ್ಷಣೆ ಮಾಡುವ ಬಗ್ಗೆ ಜಾಗೃತರಾಗಬೇಕಿದೆ. ಮಳೆನೀರನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಬೇಕು.
ಹನಿ ಹನಿ ನೀರು ಸೇರಿ ಒಂದು ಬಕೇಟ್ ನೀರಾಗುತ್ತದೆ. ಎಷ್ಟೋ ಬಕೇಟ್‌ಗಳ ನೀರಿನ ಸಂಗ್ರಹದಿಂದ ಒಂದು ಕೆರೆ ತುಂಬುತ್ತದೆ. ಎಷ್ಟೋ ಕೆರೆಗಳು ಸೇರಿ ಒಂದು ನದಿಯಾಗುತ್ತದೆ. ಹಲವಾರು ನದಿಗಳು ಸೇರಿ ಸಮುದ್ರವಾಗುತ್ತದೆ. ಅಂದರೆ ಒಂದು ಹನಿ ನೀರಿಗೆ ಅದರದ್ದೇ ಆದ ಮಹತ್ವ ಇದೆ.
ನಾವು ಹನಿ ಹನಿ ನೀರು ಉಳಿಸಿ ಜೀವ ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.
ಆದ್ದರಿಂದ ನಾವು ನೀರನ್ನು ಪೋಲು ಮಾಡದೇ ಅಂತರ್ಜಲವನ್ನು ಸಂರಕ್ಷಿಸುವ ಮೂಲಕ ನೀರನ್ನು ಮಿತವಾಗಿ ಬಳಸಬೇಕಿದೆ. ಹಾಗೆಯೇ, ನಾಳಿನ ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ.