ಮಡಿಕೇರಿ ಮಾ.22 NEWS DESK : ಅನ್ನಭಾಗ್ಯ, ಬಸ್ ನಲ್ಲಿ ಉಚಿತ ಪ್ರಯಾಣ ಭಾಗ್ಯ, ಮಾಸಿಕ ರೂ.2 ಸಾವಿರ ಭಾಗ್ಯ ನೀಡುತ್ತಿರುವ ಸರಕಾರ ಬಡವರಿಗೆ ಭೂಮಿಭಾಗ್ಯ ಯಾಕೆ ನೀಡುತ್ತಿಲ್ಲವೆಂದು ಪ್ರಶ್ನಿಸಿರುವ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ, ಉಳ್ಳವರಿಗೆ ಜಮೀನು ಗುತ್ತಿಗೆ ನೀಡುವ ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೆ ಲೋಕಸಭಾ ಚುನಾವಣೆಯಲ್ಲಿ ನಿವೇಶನ ಮತ್ತು ವಸತಿ ರಹಿತರು ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹೆಚ್.ಬಿ.ರಮೇಶ್ ನಿರ್ವಸತಿಗ ಕಾರ್ಮಿಕರಿಗೆ, ಬಡವರಿಗೆ ಅನ್ಯಾಯವೆಸಗುವ ರಾಜ್ಯ ಸರ್ಕಾರದ ‘ಪ್ಲಾಂಟೇಶನ್ ಬೆಳೆಗಳ ಜಮೀನು ಗುತ್ತಿಗೆ’ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ಸಹಸ್ರಾರು ಕಾರ್ಮಿಕರು ಸೂರಿಲ್ಲದೆ, ವಿವಿಧ ತೋಟಗಳ ಲೈನ್‍ಮನೆಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಚೆರಿಯಪರಂಬು ವಿಭಾಗದಲ್ಲಿ ಬಡವರ್ಗದ ಮಂದಿಯ ಗುಡಿಸಲುಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಹೋರಾಟಗಳನ್ನು ನಡೆಸಲಾಗಿದೆ. ಇದರ ನಡುವೆ ಹಿಂದಿನ ಬಿಜೆಪಿ ಸರ್ಕಾರ ಪ್ರಸ್ತಾಪಿಸಿದ್ದ ಪ್ಲಾಂಟೇಶನ್ ಬೆಳೆಗಳ ಭೂಮಿಯನ್ನು ಗುತ್ತಿಗೆ ನೀಡುವ ಪ್ರಸ್ತಾಪವನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರುವ ಮೂಲಕ ಶ್ರಮಿಕ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಅಶೋಕ್ ಅವರು ಪ್ಲಾಂಟೇಶನ್ ಮಾಡಿದ ಸರ್ಕಾರಿ ಜಾಗವನ್ನು ಗುತ್ತಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಈಗಿನ ಸರ್ಕಾರ ಇದೇ ಮಾ.12 ರಂದು ಹೊರಡಿಸಿರುವ ಆದೇಶದಲ್ಲಿ 25 ಏಕರೆ ವರೆಗಿನ ಪ್ಲಾಂಟೇಶನ್ ಮಾಡಿದ ಸರ್ಕಾರಿ ಜಾಗವನ್ನು ಭೂ ಹಿಡುವಳಿದಾರರಿಗೆ ನೀಡಲು ಮುಂದಾಗಿದೆಯೆಂದು ಆಕ್ಷೇಪ ವ್ಯಕಪಡಿಸಿದರು.
ಈ ಆದೇಶದಲ್ಲಿ ಒಂದು ಏಕರೆ ಜಾಗ ಗುತ್ತಿಗೆ ಪಡೆಯುವವರಿಗೆ ವಾರ್ಷಿಕ 1 ಸಾವಿರ ರೂ., 1 ರಿಂದ 5 ಏಕರೆ ವರೆಗೆ 1500 ರೂ., 5 ರಿಂದ 10 ಏಕರೆಗೆ 2 ಸಾವಿರ ರೂ., 10 ರಿಂದ 15 ಏಕರೆಗೆ 25 ಸಾವಿರ ರೂ., 15 ರಿಂದ 20 ಏಕರೆಗೆ 3 ಸಾವಿರ ಹಾಗೂ 20 ರಿಂದ 25 ಏಕರೆವರೆಗೆ ಗುತ್ತಿಗೆ ಪಡೆಯುವವರಿಗೆ 3500 ರೂ. ಗುತ್ತಿಗೆ ಮೊತ್ತ ನಿಗದಿ ಪಡಿಸಿದೆ. ಬಡ ವರ್ಗದ ಮಂದಿಗೆ ಇದೇ ಜಾಗವನ್ನು ಹೆಚ್ಚಿನ ಗುತ್ತಿಗೆ ಮೊತ್ತಕ್ಕೆ ನೀಡಲಿ ನಾವೇ ಅದನ್ನು ಪಡೆಯುವುದಾಗಿ ತಿಳಿಸಿದರು.
ಜಾಗವಿಲ್ಲ ಎನ್ನುತ್ತಲೆ ಗುತ್ತಿಗೆ ನೀಡಲು ಮುಂದಾದ ಸರ್ಕಾರ-ಕಳೆದ ಹಲವಾರು ವರ್ಷಗಳಿಂದ ನಿರ್ವಸತಿಗ ಕೂಲಿ ಕಾರ್ಮಿಕರು, ಲೈನ್ ಮನೆಯಲ್ಲಿ ನೆಲೆಸಿರುವ ಕಾರ್ಮಿಕರು ನಿವೇಶನಕ್ಕಾಗಿ ಸರ್ಕಾರವನ್ನು ಒತ್ತಾಯಿಸುತ್ತಲೆ ಬಂದಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲಿ ಅಗತ್ಯ ಸರ್ಕಾರಿ ಜಾಗವಿಲ್ಲವೆನ್ನುವ ಕಾರಣಗಳನ್ನು ನೀಡುತ್ತಾ ಬಂದಿರುವ ಸರ್ಕಾರ, ಇದೀಗ ಒತ್ತುವರಿ ಮಾಡಿಕೊಂಡು ಪ್ಲಾಂಟೇಶನ್ ಮಾಡಿದ ಜಾಗವನ್ನು ಉಳ್ಳವರಿಗೆ ಗುತ್ತಿಗೆ ನೀಡಲು ಮುಂದಾಗಿದೆ ಎಂದರು.
ಸಮಿತಿಯ ಮತ್ತೊಬ್ಬ ಸಂಚಾಲಕ ವೈ.ಕೆ.ಗಣೇಶ್ ಮಾತನಾಡಿ, ಸರ್ಕಾರದ ಈ ಆದೇಶ ನಿವೇಶನ ರಹಿತರಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಉಳ್ಳವರಿಗೆ ಮತ್ತೆ ಸರ್ಕಾರಿ ಪ್ಲಾಂಟೇಶನ್ ಜಾಗವನ್ನು ಗುತ್ತಿಗೆ ನೀಡುತ್ತಿರುವುದಾದರು ಯಾಕೆ, ಆದಿವಾಸಿಗಳು ಹಾಗೂ ಬಡ ಕೂಲಿ ಕಾರ್ಮಿಕರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.
ಸಿಪಿಐ ಜಂಟಿ ಕಾರ್ಯದರ್ಶಿ ರಮೇಶ್ ಮಾಯಮುಡಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಏಕರೆ ಸರ್ಕಾರಿ ಪ್ಲಾಂಟೇಶನ್ ಜಾಗವನ್ನಷ್ಟೆ ಗುತ್ತಿಗೆ ನೀಡಲು ಉದ್ದೇಶಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಈ ಮಿತಿಯನ್ನು 25 ಏಕರೆಗೆ ವಿಸ್ತರಿಸಿರುವುದು ಸಮಂಜಸವಲ್ಲ. ಜಿಲ್ಲೆಯಲ್ಲಿ 65 ಸಾವಿರಕ್ಕೂ ಹೆಚ್ಚಿನ ಬಡ ನಿರ್ವಸತಿಗ ಕುಟುಂಬಗಳಿದ್ದು, ಇವರಲ್ಲಿ ಬಹುತೇಕ ಮಂದಿ ಆಯಾ ಗ್ರಾಮ ಪಂಚಾಯ್ತಿಗಳಿಗೆ ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಸರ್ಕಾರ ತನ್ನ ಆದೇಶವನ್ನು ರದ್ದುಗೊಳಿಸಿ, ಒತ್ತುವರಿ ಸರ್ಕಾರಿ ಪ್ಲಾಂಟೇಶನ್ ಜಾಗವನ್ನು ನಿರ್ವಸತಿಗ ಕಾರ್ಮಿಕರಿಗೆ ಒದಗಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಹೆಚ್.ಆರ್.ಶಿವಣ್ಣ ಮಾತನಾಡಿ, ಸರ್ಕಾರ ತನ್ನ ಆದೇಶ ಹಿಂದಕ್ಕೆ ಪಡೆಯದಿದ್ದಲ್ಲಿ, ಕೊಡಗನ್ನು ಒಳಗೊಂಡಂತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ವಿಭಾಗದ ಲಕ್ಷಾಂತರ ಮಂದಿ ಕಾರ್ಮಿಕ ಸಮೂಹ ತೀವ್ರ ರೀತಿಯ ಹೋರಾಟ ನಡೆಸಲಿದೆ ಎಂದರು.
ದಸಂಸ ವಿಭಾಗೀಯ ಸಂಚಾಲಕ ಹೆಚ್.ಎಸ್.ಕೃಷ್ಣಪ್ಪ ಮಾತನಾಡಿ, ಒತ್ತುವರಿ ಸರ್ಕಾರಿ ಜಾಗವನ್ನು ತೆರವುಗೊಳಿಸಿ, ನಿರ್ವಸತಿಗ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು 5 ಏಕರೆ ಜಾಗವನ್ನು ನೀಡಲು ಸರ್ಕಾರ ಮುಂದಾಗಬೇಕು. ಉಳ್ಳವರ ಪರವಾಗಿರುವ ಆದೇಶ ಹಿಂಪಡೆಯದಿದ್ದಲ್ಲಿ “ವಿಧಾನ ಸೌಧ” ಚಲೋ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದಸಂಸ ಸಂಚಾಲಕ ಹೆಚ್.ಆರ್.ಪರಶುರಾಮ್ ಮಾತನಾಡಿ, ಲೋಕಸಭಾ ಚುನಾವಣೆಗೂ ಮೊದಲು ಸರಕಾರ ಉಳ್ಳವರ ಪರವಾಗಿರುವ ಆದೇಶವನ್ನು ಹಿಂದಕ್ಕೆ ಪಡೆದು ನಿವೇಶನ ರಹಿತರಿಗೆ ಭೂಮಿ ನೀಡಬೇಕು. ತಪ್ಪಿದಲ್ಲಿ ಮತದಾನದ ವಿಚಾರದಲ್ಲಿ ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*