ಕುಶಾಲನಗರ, ಮಾ.22 NEWS DESK : ಪ್ರತಿಯೊಬ್ಬರೂ ನಾಳಿನ ಉತ್ತಮ ಭವಿಷ್ಯತ್ತಿಗಾಗಿ ನೀರನ್ನು ಮಿತವಾಗಿ ಬಳುಸುವುದರ ಮೂಲಕ ಜಲ ಸಂರಕ್ಷಣೆಗಾಗಿ ನಾವು ಸಾಮೂಹಿಕವಾಗಿ ಜಲ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದು ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕ ಸಹಯೋಗದೊಂದಿಗೆ “ಶಾಂತಿಗಾಗಿ ನೀರು” ಎಂಬ ಧ್ಯೇಯದೊಂದಿಗೆ ವಿಶ್ವ ಜಲ ದಿನ:2024ರ ಅಂಗವಾಗಿ ನಡೆದ ಜಲ ಸಂರಕ್ಷಣಾ ಜಾಗೃತಿ ಆಂದೋಲನದಲ್ಲಿ ನೀರಿನ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿ ಜಲ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ನಿತ್ಯ ಬಳಸುವ ನೀರನ್ನು ಮರುಬಳಕೆ ಮಾಡಬೇಕು. ಮಿತಿಮೀರಿ ಕೊಳವೆ ಬಾವಿ ತೆಗೆಸುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಪ್ರಕೃತಿಯಲ್ಲಿ ಅಮೂಲ್ಯವಾಗಿರುವ ನೀರನ್ನು ಸಂರಕ್ಷಿಸುವ ದೃಷ್ಟಿಯಿಂದ ಜಲಮೂಲಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಪ್ರಕೃತಿಯ ಅತ್ಯಮೂಲ್ಯ ಸಂಪತ್ತಾದ ನೀರನ್ನು ಅಪವ್ಯಯ ಮಾಡದೇ ಸಂರಕ್ಷಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ನೀರನ್ನು ಸಂಗ್ರಹಿಸಿಡಬೇಕಾಗಿದೆ. ಮಳೆಯ ಸಂಗ್ರಹಣೆ ಹಾಗೂ ಅಂತರ್ಜಲ ಸಂರಕ್ಷ ಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಪ್ರಸಕ್ತ ವರ್ಷ ಬೇಸಿಗೆಗೂ ಮುನ್ನ ಜೀವ ನದಿ ಕಾವೇರಿ ಸೇರಿದಂತೆ ನಾಡಿನ ಎಲ್ಲಾ ನದಿ ಗಳು, ಕೆರೆಗಳು ಹಾಗೂ ಜಲಮೂಲಗಳು ಕ್ಷೀಣಿಸುತ್ತಿವೆ. ಈ ದಿಸೆಯಲ್ಲಿ ಅಂತರ್ಜಲ ಮತ್ತು ಜಲಮೂಲಗಳ ಸಂರಕ್ಷಣೆ ದೃಷ್ಠಿಯಲ್ಲಿ ಜನರಲ್ಲಿ ನೀರಿನ ಮಿತ ಬಳಕೆ ಮತ್ತು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಜಲ ದಿನದ ಮಹತ್ವ ಕುರಿತು ಮಾತನಾಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಜನರಲ್ಲಿ ಜಲ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾ.22 ರಂದು ವಿಶ್ವ ಜಲ ದಿನ ಎಂದೂ ಕರೆಯುವ ಅಂತರಾಷ್ಟ್ರೀಯ ಜಲ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ನಾವು ಜಲ ಸಂರಕ್ಷಣೆ ಬಗ್ಗೆ ತ್ವರಿತಗತಿಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ. ವಿದ್ಯಾರ್ಥಿಗಳು ನೀರಿನಮಿತ ಬಳಕೆ ಕುರಿತು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ರಮ್ಯ ಹೇಳಿದರು.
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ ಹಾಗೂ ವಿದ್ಯಾರ್ಥಿಗಳು ಇದ್ದರು.