ಮಡಿಕೇರಿ ಮಾ.22 NEWS DESK : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಡಗು ಜಿಲ್ಲೆಯಿಂದಲೇ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ತಮ್ಮ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.
ಶುಕ್ರವಾರ ಬೆಳಗ್ಗೆ ಭಾಗಮಂಡಲಕ್ಕೆ ಆಗಮಿಸಿದ ಯದುವೀರ್ ಅವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ತ್ರಿವೇಣಿ ಸಂಗಮಕ್ಕೆ ತೆರಳಿದ ಯದುವೀರ್ ಪುಣ್ಯ ನೀರು ಪ್ರೋಕ್ಷಣೆ ಮಾಡಿ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಪುಣ್ಯ ಕ್ಷೇತ್ರ ತಲಕಾವೇರಿಗೆ ತೆರಳಿ ಮಾತೆ ಕಾವೇರಿಗೆ ನಮಿಸಿ ಪ್ರಾರ್ಥನೆ ಸಲ್ಲಿಸಿದರು.
ಚೇರಂಬಾಣೆಯಲ್ಲಿ 4 ಗ್ರಾಮ ಪಂಚಾಯಿತಿ ಒಳಗೊಂಡ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಯದುವೀರ್ ಒಡೆಯರ್ ಅವರು, ಪ್ರಧಾನಿ ನರೇಂದ್ರ ಮೋದಿ ದೇಶವನ್ನು 2047ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಪಣ ತೊಟ್ಟು ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ತತ್ವದಡಿಯಲ್ಲಿ ಮುಂದಿನ ಪೀಳಿಗೆಗೆ ಸಮೃದ್ಧ ಭಾರತವನ್ನು ನೀಡುವುದೇ ನಮ್ಮ ಗುರಿಯಾಗಬೇಕು. ಎಲ್ಲರೂ ಒಂದಾಗಿ ಭಾರತವನ್ನು ಸುಭದ್ರ ರಾಷ್ಟ್ರ ಮಾಡೋಣ ಎಂದು ಕರೆ ನೀಡಿದರು. ಕೊಡಗು-ಮೈಸೂರು ಅಭಿವೃದ್ಧಿ ಹೊಂದಿದ ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲರೂ ತಮಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿ ಮತಯಾಚಿಸಿದರು.









