ಮಡಿಕೇರಿ ಮಾ.23 NEWS DESK : ಮಲೆನಾಡಿನ ಹಸಿರ ಒಡಲಲ್ಲಿ ಬೆರೆತು, ಪರಿಸರ ಪ್ರಜ್ಞೆಯ ಲೇಖನಗಳ ಸರಮಾಲೆಯ ಮೂಲಕ ಓರ್ವ ಪರಿಸರ ಪ್ರೇಮಿಯಾಗಿ ಬೆಳೆದ ಹಿರಿಯ ಸಾಹಿತಿ ನಾ.ಡಿಸೋಜ ಅವರ ಎಲ್ಲಾ ಲೇಖನಗಳು ಸಮಾಜಮುಖಿಯಾಗಿವೆ ಎಂದು ಸಾಹಿತಿ, ಕಲಾವಿದೆ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಮಿಲನ ಭರತ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಆಶ್ರಯದಲ್ಲಿ ನಗರದ ಸಹಕಾರಿ ಡಿಪ್ಲೋಮ ತರಬೇತಿ ಕೇಂದ್ರದಲ್ಲಿ ನಡೆದ ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ, ಕಥಾ ಸ್ಪರ್ಧೆ ಮತ್ತು ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಮಲೆನಾಡಿನ ಹಸಿರ ಪರಿಸರವನ್ನೆ ಕೇಂದ್ರವಾಗಿಟ್ಟುಕೊಂಡು ಅವರು ಬರೆದ ದ್ವೀಪ, ನಡುವೆ ನಿಂತ ಜನ, ಮಂಜುಗೆಡ್ಡೆ, ಕಾಡಿನ ಬೆಂಕಿ, ಒಂದು ಜಲಪಾತದ ಸುತ್ತ ಮತ್ತು ಈ ನೆಲ ಈ ಜಲದಂತಹ ಕಾದಂಬರಿಗಳು ಸದ್ದಿಲ್ಲದೇ ಜಾಗೃತಿಯ ಬೆಳೆ ಬೆಳೆಯುತ್ತಾ ಕ್ರಾಂತಿಯ ಹೊಳೆ ಹರಿಸುವಂತೆ ಮಾಡಿದೆ. ಕುವೆಂಪು, ತೇಜಸ್ವಿ ಹೊರತುಪಡಿಸಿದಂತೆ ಮಲೆನಾಡಿನ ಪರಿಸರದೊಂದಿಗೆ ಇಷ್ಟೊಂದು ಕಾಳಜಿ ಇಟ್ಟುಕೊಂಡು ಕೃತಿಗಳನ್ನು ರಚಿಸಿದವರು ನಾ.ಡಿಸೋಜರವರು ಮಾತ್ರ ಎಂದು ಮಿಲನ ಭರತ್ ಹೇಳಿದರು.
ಸಾಹಿತಿಗಳು ರಚಿಸಿರುವ ಕಥೆ, ಕಾದಂಬರಿ ಇನ್ನಿತರ ಸಾಹಿತ್ಯಿಕ ಪುಸ್ತಕಗಳನ್ನು ವಿದ್ಯಾರ್ಥಿಗಳು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯ ಪರ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಅದರಲ್ಲಿ ಭಾಗವಹಿಸಬೇಕು. ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಬೆಳೆಸಿಕೊಂಡು ಉತ್ತಮ ರಂಗಭೂಮಿ ಕಲಾವಿದರಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕು. ನಾವಿರುವ ಸ್ಥಳದಲ್ಲಿಯೇ ನಮ್ಮ ಪ್ರಕೃತಿ, ಪರಿಸರ, ಜನಜೀವನ, ಬದುಕು ಗ್ರಾಮೀಣ ಜಾನಪದ ಕಲೆಗಳ ಕುರಿತಂತೆ ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.
ನಾ.ಡಿಸೋಜ ಅವರ ಹೆಸರಿನಲ್ಲಿ ಪ್ರತಿ ವರ್ಷ ನಡೆಯುವ ದತ್ತಿ ಕಾರ್ಯಕ್ರಮದಲ್ಲಿ ಏರ್ಪಡಿಸುವ ಕಥಾ ಸ್ಪರ್ಧೆ, ನಾಟಕ ಸ್ಪರ್ಧೆ, ಪರಿಸರ ಪ್ರಜ್ಞೆ ಮತ್ತು ಮಕ್ಕಳ ಸಾಹಿತ್ಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಾವಂತರಾಗಿ ಬೆಳೆಯಬೇಕೆಂದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾ.ಡಿಸೋಜ ಎಂದರೆ, ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿಯಷ್ಟೆ ಅಲ್ಲ. ಅಕ್ಷರಗಳಲ್ಲಿ ಸಾಹಿತ್ಯವನ್ನು ಮಾತ್ರ ನಿರ್ಮಿಸಿದವರಷ್ಟೆ ಅಲ್ಲ, ಲೇಖನಿಯಿಂದ ಬರಿ ಪುಸ್ತಕಗಳ ಶಿಖರವನ್ನು ಕಟ್ಟಿದವರಲ್ಲ. ಬದಲಾಗಿ ಅವರು ಅತ್ಯಂತ ಪ್ರಕರವಾದ ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವ ಧರ್ಮ ಸಮಭಾವದ ಪ್ರತಿಪಾದಕ. ವಿಶ್ವ ಮಾನವತ್ವ ಮೋಳೈಸಿಕೊಂಡ ದಾರ್ಶನಿಕ. ಕ್ರೈಸ್ತ ದರ್ಶನವನ್ನು ತಿಳಿದಿರುವಷ್ಟೆ ಹಿಂದೂ, ಮುಸ್ಲಿಂ ಹಾಗೂ ಜೈನ್ ಮತ್ತು ಇನ್ನಿತರ ಧರ್ಮ ದರ್ಶನಗಳನ್ನು ಅರಿತ ಅರಿವಿನ ಹರಿವಾಣ. ಕಳೆದು ಹೋದ ಒಂದು ಕಾಲ ಮನದ ಸಾಕ್ಷಿ ಪ್ರಜ್ಞೆಯಾಗಿ ಹಲವು ಹತ್ತು ವಿಷಯಗಳಿಗೆ ಕನ್ನಡಿಯಾದ ಬಹುಮುಖ ಪ್ರತಿಭೆ. ಪರಿಸರ ಪ್ರಜ್ಞೆಯ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸಮಾಜಮುಖಿ, ಅಪ್ರತಿಮ ಕನ್ನಡ ಪ್ರಜ್ಞೆಯ ಸಾಗರದ ಸರ್ವಮುಖಿ, ಪರಿಸರ ಸಂರಕ್ಷಿಸುವ ಪರಿಸರ ಪರ ಹೋರಾಟಗಾರ, ಕನ್ನಡಕ್ಕಾಗಿ ಕೈಯೆತ್ತುವ, ಕೊರಳೆತ್ತುವ ಕನ್ನಡ ಚಳುವಳಿಗಾರ, ಡಿಸೋಜ ಅವರದು ಬದುಕು ಬೇರೆಯಲ್ಲ ಬರಹ ಬೇರೆಯಲ್ಲ, ಎರಡು ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ನಡೆಯೊಂದು ನುಡಿಯೊಂದು ಇಲ್ಲವೇ ಇಲ್ಲ, ಬದ್ಧತೆ ರಕ್ತ ಗತವಾಗಿ ಬಂದದ್ದೆಂದು ಮುನೀರ್ ಅಹ್ಮದ್ ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘ್ಘಾಟಿಸಿದ ಸಂಸ್ಥೆಯ ಪ್ರಾಚಾರ್ಯರಾದ ಡಾ. ಆರ್.ಎಸ್.ರೇಣುಕಾ ಅವರು ಮಾತನಾಡಿ, ಸಹಕಾರಿ ಡಿಪ್ಲೋಮಾ ತರಬೇತಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಪರಿಷತ್ತಿಗೆ ಅಭಿನಂದನೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಬೆಳೆದು ಬಂದ ಹಿನ್ನೆಲೆಯ ಕೆಲವು ತುಣುಕುಗಳನ್ನು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿ ತಾಲ್ಲೂಕು ಕ.ಸಾ.ಪ. ದ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2014ರ ಜನವರಿಯಲ್ಲಿ ಮಡಿಕೇರಿಯಲ್ಲಿ 3 ದಿನ ನಡೆಸಿದಾಗ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿಸೋಜ ಅವರು ನಮ್ಮೊಡನೆ ಇದ್ದು ಬೆರೆತ ವಿಚಾರಗಳನ್ನು ಸ್ಮರಿಸಿಕೊಂಡರು.
ನಾಟಕ ಸ್ಪರ್ಧೆ ಮತ್ತು ಕಥಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಓದಿದರು.
ವೇದಿಕೆಯಲ್ಲಿ ಜಿಲ್ಲಾ ಗೌ.ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಉಪಸ್ಥಿತರಿದ್ದರು. ರಶ್ಮಿತಾ ಕಾರ್ಯಕ್ರಮ ನಿರೂಪಣೆ, ಹರೀಶ್ ಸ್ವಾಗತಿಸಿದರು. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಪತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ವಂದನಾರ್ಪಣೆ ಮಾಡಿದರು.












