ಮಡಿಕೇರಿ ಮಾ.23 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಒಬ್ಬ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಇವರ ಗೆಲುವು ನಿಶ್ಚಿತವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ರಾಜಕಾರಣದಲ್ಲಿ ಅಪರೂಪವೆಂಬAತೆ ಅತ್ಯಂತ ಸರಳ ಹಾಗೂ ಸಜ್ಜನ ಗುಣ ಹೊಂದಿರುವ ಎಂ.ಲಕ್ಷ್ಮಣ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಸ್ವಾಗತಾರ್ಹವಾಗಿದೆ. ಇವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದಾಕ್ಷಣ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸೇರಿದಂತೆ ಎಲ್ಲಾ ಸಮುದಾಯದ ಮಂದಿ ಬೆಂಬಲ ಸೂಚಿಸುತ್ತಿದ್ದು, ಗೆಲುವು ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.
ಜನಪರ ಮತ್ತು ನಿಷ್ಪಕ್ಷಪಾತ ಹೋರಾಟದ ಮೂಲಕವೇ ಕೇಂದ್ರ ಸರಕಾರದ ವೈಫಲ್ಯಗಳನ್ನು ಬಯಲಿಗೆಳೆದ ಹೆಗ್ಗಳಿಕೆ ಇವರದ್ದಾಗಿದೆ. ಕೆಪಿಸಿಸಿ ವಕ್ತಾರರಾಗಿದ್ದರೂ ಸಾಮಾನ್ಯ ಕಾರ್ಯಕರ್ತರಂತೆ ಕಾರ್ಯಕರ್ತರೊಂದಿಗೆ ಬೆರೆಯುವ ಲಕ್ಷ್ಮಣ್ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಸಾಮರ್ಥ್ಯ ಹೊಂದಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಯ ಬಗ್ಗೆ ತೃಪ್ತಿ ಹೊಂದಿರುವ ಮೈಸೂರು- ಕೊಡಗು ಕ್ಷೇತ್ರದ ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಸಂಸದರು ಕೂಡ ಕಾಂಗ್ರೆಸ್ಸಿಗರೇ ಆದರೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವ ಸತ್ಯವನ್ನು ಕ್ಷೇತ್ರದ ಜನ ಅರಿತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇಬ್ಬರ ಕಾಂಗ್ರೆಸ್ ಶಾಸಕರಿಂದ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಅಧಿಕಾರಕ್ಕೆ ಬಂದ ಕೇವಲ 10 ತಿಂಗಳುಗಳಲ್ಲಿ ಪ್ರತಿಯೊಂದು ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಗೆ ಮಾದರಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಸುದೀರ್ಘ ಕಾಲ ಬಿಜೆಪಿ ಮಂದಿ ಕೊಡಗು ಜಿಲ್ಲೆಯಲ್ಲಿ ಆಡಳಿತ ನಡೆಸಿದರೂ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳಿಗೆ ಸ್ಪಂದಿಸಿ ಶೀಘ್ರ ಪರಿಹಾರ ಸೂಚಿಸುವ ಮೂಲಕ ಈಗಿನ ಇಬ್ಬರು ಶಾಸಕರು ದಕ್ಷತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಜಿಲ್ಲೆಯ ಇಬ್ಬರು ಶಾಸಕರೊಂದಿಗೆ ಸಂಸದರಾಗಿ ಲಕ್ಷ್ಮಣ್ ಅವರು ಕೂಡ ಕೈಜೋಡಿಸಿದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಈ ಅಂಶಗಳ ಬಗ್ಗೆ ಕ್ಷೇತ್ರದ ಮತದಾರರಿಗೆ ಅರಿವಿದ್ದು, ಕಾಂಗ್ರೆಸ್ ಗೆಲುವು ಖಚಿತವಾಗಿದೆ ಎಂದು ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ.










