ಮಡಿಕೇರಿ ಮಾ.23 NEWS DESK : ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯ ಲಗಾಮು ಕೇವಲ ಎರಡು ಮೂರು ಮಂದಿಯ ಕೈಯಲ್ಲಿರುವುದು ಜಗಜ್ಜಾಹೀರಾಗಿದ್ದು, ಲೋಕಸಭಾ ಚುನಾವಣೆಗೆ ಆ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಬಗ್ಗೆ ಸ್ವತ: ಜನರೇ ನಿರಾಶರಾಗಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕಗಳಿಂದ ಕೊಡಗು- ಮೈಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದ ಬಿಜೆಪಿ, ಅದಕ್ಕೆ ಸೂಕ್ತ ಕಾರಣವನ್ನು ಜನರಿಗೆ ನೀಡುವ ಉತ್ತರದಾಯಿತ್ವವನ್ನು ಹೊಂದಿದೆ. ಟಿಕೆಟ್ ನೀಡದಿರಲು ಅವರು ನಿಷ್ಕ್ರೀಯರಾಗಿದ್ದರೆ ಅಥವಾ ಜನವಿರೋಧಿಯಾಗಿದ್ದರೆ ಎನ್ನುವುದನ್ನು ಸ್ಪಷ್ಟಪಡಿಸಬೇಕಾಗಿತ್ತು. ಆದರೆ ಅದ್ಯಾವುದನ್ನು ಮಾಡದೆ ಹೊಸ ಅಭ್ಯರ್ಥಿಗೆ ಅವಕಾಶ ನೀಡಿದೆ. ತನ್ನ ಯಾವುದೇ ನಡೆಗಳಿಗೆ ಕಾರಣಗಳನ್ನು ನೀಡವುದಿಲ್ಲ ಎನ್ನುವ ಬಿಜೆಪಿ ಧೋರಣೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡದಿರುವುದು, ಶೋಭಾ ಕರಂದ್ಲಾಜೆ ಅವರಿಗೆ ಅವರ ಕ್ಷೇತ್ರವನ್ನು ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದಕ್ಕೆ ಕಾರಣವೇನೆಂದು ಪ್ರಶ್ನಿಸಿದ ಪೊನ್ನಣ್ಣ, ಜನರ ಸೇವೆ ಮಾಡುವ ಮನಸ್ಥಿತಿ ಬಿಜೆಪಿಗೆ ಇಲ್ಲವೆಂದು ದೂಷಿಸಿದರು.
ಪ್ರಸ್ತುತ ಕೊಡಗು-ಮೈಸೂರು ಕ್ಷೇತ್ರಕ್ಕೆ ರಾಜ ವಂಶಸ್ಥರಾದ ಯದುವೀರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಆಶ್ಚರ್ಯವೆಂದರೆ, ಅವರ ಜನಪರವಾದ ಕಾಳಜಿ, ಚಿಂತನೆಗಳು, ಜನಸೇವೆಯ ದೃಷ್ಟಿಕೋನಗಳು ಏನೆಂಬುದು ಯಾರಿಗೂ ತಿಳಿದಿಲ್ಲ. ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವವರ ಎಲ್ಲಾ ವಿಚಾರಗಳು ಜನರಿಗೆ ತಿಳಿಯವುದು ಅತ್ಯವಶ್ಯವೆಂದು ಹೇಳಿದರು.
ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಓರ್ವ ಇಂಜಿಯರ್ ಪದವೀಧರರಾಗಿದ್ದು, ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಶೇಷ ಜ್ಞಾನವನ್ನು ಹೊಂದಿದ್ದಾರೆ. ಇವರು ಅಭ್ಯರ್ಥಿಯಾಗುವುದಕ್ಕೂ ಮೊದಲೇ ಈ ಕ್ಷೇತ್ರದ ಜನರೊಂದಿಗೆ ಬೆರೆತವರು ಮತ್ತು ಅವರು ಪಕ್ಷದ ಕಾರ್ಯಕರ್ತರಾಗಿ ಈ ಹಂತಕ್ಕೆ ಬೆಳೆದವರು ಎಂದು ಪೊನ್ನಣ್ಣ ತಿಳಿಸಿದರು.
::: ಕಾಂಗ್ರೆಸ್‍ಗೆ 18 ರಿಂದ 20 ಸ್ಥಾನ :::
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳು, ನೀಡಿರುವ ಗ್ಯಾರಂಟಿ, ಶಾಂತಿ ಸುವ್ಯವಸ್ಥೆಗಳ ಕ್ರಮಗಳ ಹಿನ್ನೆಲೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕೊಡಗು –ಮಂಗಳೂರು ಕ್ಷೇತ್ರವನ್ನು ಒಳಗೊಂಡಂತೆ 18 ರಿಂದ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ಧೈರ್ಯವಿದ್ದರೆ ತನಿಖೆ ನಡೆಸಲಿ :::
ಕೇಂದ್ರ ಸರ್ಕಾರದ ‘ಇಲೆಕ್ಷನ್ ಬಾಂಡ್’ ರಾಷ್ಟ್ರದ ಅತ್ಯಂತ ದೊಡ್ಡ ಹಗರಣವಾಗಿದ್ದು, ಧೈರ್ಯವಿದ್ದರೆ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ಈ ಬಗ್ಗೆ ತನಿಖೆ ನಡೆಸಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಸವಾಲು ಹಾಕಿದರು.
ಇಲೆಕ್ಷನ್ ಬಾಂಡ್‍ನಲ್ಲಿ ಎಸ್‍ಬಿಐ ಮೂಲಕ ಹಣ ತೊಡಗಿಸುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎನ್ನುವ ಕೇಂದ್ರದ ಉದ್ದೇಶವೇ ತಪ್ಪೆಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಇಲೆಕ್ಷನ್ ಬಾಂಡ್‍ಗೆ ಸಂಬಂಧಿಸಿದಂತೆ ತನಿಖೆ ನಡೆದರೆ ಸತ್ಯ ಹೊರ ಬರುತ್ತದೆ ಎಂದರು.









