ಮಡಿಕೇರಿ ಮಾ.23 NEWS DESK : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ‘ಶ್ವೇತ ಪತ್ರ’ವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಬಿಡುಗಡೆ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಳೆದ 10 ತಿಂಗಳ ಅವಧಿಯಲ್ಲಿ ತನ್ನ ಕ್ಷೇತ್ರದ 58 ಗ್ರಾಮ ಪಂಚಾಯ್ತಿ, ಒಂದು ಪುರಸಭೆಗೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಬೆರೆತು, ಅಭಿವೃದ್ಧಿ ಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಚುನಾವಣಾ ಘೋಷಣೆಯ ಬಳಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಬಾರದೆನ್ನುವ ಚಿಂತನೆಗಳಡಿ ಚುನಾವಣಾ ಘೋಷಣೆಗೂ ಮುನ್ನ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿ ಚಾಲನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
::: ರಾಜಕೀಯ ತೊರೆಯುತ್ತೇನೆ :::
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ತಾವು ಚಾಲನೆ ನೀಡಿದ ಕಾಮಗಾರಿ, ಅನುದಾನಗಳೆಲ್ಲವೂ ಹಿಂದಿನ ಬಿಜೆಪಿ ಸರ್ಕಾರದ್ದೆಂದು ಬಿಜೆಪಿ ಮಂದಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ತಾವು ಚಾಲನೆ ನೀಡಿದ ಕಾಮಗಾರಿ, ಅದಕ್ಕೆ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ವಿವರಗಳನ್ನು ಶ್ವೇತಪತ್ರದ ಮೂಲಕ ನೀಡುತ್ತಿರುವುದಾಗಿ ಪೊನ್ನಣ್ಣ ಸ್ಪಷ್ಟಪಡಿಸಿದರು.
ಗೋಣಿಕೊಪ್ಪಲು ಬಸ್ ನಿಲ್ದಾಣ ನಿರ್ಮಾಣದ ಬಗ್ಗೆಯೂ ಬಿಜೆಪಿ ಮಂದಿ ಇದೇ ರೀತಿಯ ಆರೋಪ ಮಾಡಿದ್ದಾರೆ. ಬಿಜೆಪಿ ಮಂದಿ ಈ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅವರ ಸರ್ಕಾರದ ಅವಧಿಯಲ್ಲಿ ಮಾಡಿರುವ ಬಗ್ಗೆ ದಾಖಲೆಯ ಒಂದು ತುಂಡು ಕಾಗದವನ್ನು ನೀಡಿದರು ನಾನು ರಾಜಕೀಯ ಜೀವನದಿಂದ ನಿವೃತ್ತನಾಗುವುದಾಗಿ ಎ.ಎಸ್.ಪೊನ್ನಣ್ಣ ಇದೇ ಸಂದರ್ಭ ಸವಾಲೊಡ್ಡಿದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಮಾಡದಿರಿ ಎಂದು ತಿಳಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆ ಮಾಡಿದ 290 ಕೋಟಿ ರೂ.ಗಳ ಕಾಮಗಾರಿಗಳಿಗೆ ತಾನು ಚುನಾವಣೆ ಮುಂಚಿತವಾಗಿ ಚಾಲನೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಮುಖ್ಯ ಮಂತ್ರಿಗಳು ಪ್ರತಿ ಶಾಸಕರಿಗೆ ನೀಡಿರುವ 25 ಕೋಟಿ ಅನುದಾನದಲ್ಲಿ ತಾನು 17 ಕೋಟಿ ರೂ.ಗಳನ್ನು ರಸ್ತೆ ಕಾಮಗಾರಿಗಳಿಗೆ ವಿನಿಯೋಗಿಸಿರವುದಾಗಿ ತಿಳಿಸಿದರಲ್ಲದೆ, ವಿರಾಜಪೇಟೆಗೆ ಕುಡಿಯುವ ನೀರನ್ನು ಒದಗಿಸುವ ಕೆಯುಡಬ್ಲ್ಯುಎಸ್ ಮೂಲಕ ಜಾರಿಯಾಗುವ 58 ಕೋಟಿ ರೂ.ಗಳ ಕಾಮಗಾರಿಗೆ ಈಗಾಗÀಲೆ ಚಾಲನೆ ನೀಡಿರುವುದಲ್ಲದೆ, ಹತ್ತು ಹಲ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಪ್ರತಿ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವುದು ಆಯಾ ವ್ಯಾಪ್ತಿಯ ಜನರ ಜವಾಬ್ದಾರಿಯೂ ಆಗಿದೆಯೆಂದು ಎಂದರು.
1.89 ಕೋಟಿ ಬರ ಪರಿಹಾರ ವಿತರಣೆ- ರಾಜ್ಯ ಸರ್ಕಾರದ ಮೂಲಕ ಜಿಲ್ಲೆಯಲ್ಲಿ ಬರ ಪರಿಹಾರವಾಗಿ ಈಗಾಗÀಲೆ 11,791 ಮಂದಿಗೆ 1,89,59,579 ರೂ.ಗಳನ್ನು ವಿತರಿಸಲಾಗಿದೆಯೆಂದು ಮಾಹಿತಿ ನೀಡಿದರು.
ತನ್ನ ಕ್ಷೇತ್ರದ ಅಭಿವೃದ್ಧಿಗೆ ತಾನು ಇಲ್ಲಿಯವರೆಗೆ ಶಕ್ತಿ ಮೀರಿ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿರುವ ಸಾರ್ಥಕ ಭಾವ ನನ್ನಲ್ಲಿದೆ. ಜನರು ತಮ್ಮ ಪ್ರೀತಿ, ವಿಶ್ವಾಸಗಳ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈಯನ್ನು ಬಲಪಡಿಸಲು ಮುಂದಾಗುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಹಲವಾರು ಮನೆಗಳಲ್ಲಿ ಮತ್ತು ದೇಗುಲಗಳ ಧಾರ್ಮಿಕ ಕಾರ್ಯಗಳಲ್ಲಿ ವನ್ಯಜೀವಿಗಳ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಇವುಗಳನ್ನು ತಮಗೆ ಒಪ್ಪಿಸಬೇಕೆನ್ನುವ ಅರಣ್ಯ ಇಲಾಖೆಯ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ತಾತ್ಕಾಲಿಕ ತಡೆಯಾಜ್ಞೆ ದೊರಕಿದೆ. ಕೆಲವೊಮ್ಮೆ ನಾವು ಸರಕಾರದ ಭಾಗವಾಗಿದ್ದರು, ಸಮಸ್ಯೆ ಬಗೆಹರಿಕೆ ಸರಕಾರದ ನಿಟ್ಟಿನಲ್ಲಿ ಸಾಧ್ಯವಾಗುವುದಿಲ್ಲ. ವನ್ಯಜೀವಿ ಉತ್ಪನ್ನಕ್ಕೆ ಸಂಬಂಧಪಟ್ಟಮತೆ ಜಿಲ್ಲೆಯ ಜನತೆಯ ಭಾವನೆಗಳಿಗೆ ಪೂರಕವಾಗಿ ನ್ಯಾಯ ದೊರಕಿಸಲು ಪ್ರಯತ್ನಿಸುವುದಾಗಿ ಪೊನ್ನಣ್ಣ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ ಹಾಗೂ ಪ್ರಮುಖರಾದ ಲವ ಚಿಣ್ಣಪ್ಪ ಉಪಸ್ಥಿತರಿದ್ದರು.









