ಸುಂಟಿಕೊಪ್ಪ ಮಾ.24 NEWS DESK : ಯೇಸುಕ್ರಿಸ್ತರು ಮರಣವನ್ನಪ್ಪಿದ “ಗುಡ್ ಫ್ರೈಡೇ” ಯ ದಿನ ಸಮೀಪಿಸುತ್ತಿದ್ದು, ಕ್ರೈಸ್ತ ಬಾಂಧವರು ಇಂದು ಜಿಲ್ಲೆಯ ಚರ್ಚ್ ಗಳಲ್ಲಿ “ಗರಿಗಳ ಹಬ್ಬದ” ಮೂಲಕ ಪವಿತ್ರ ಸಪ್ತಾಹಕ್ಕೆ ಚಾಲನೆ ನೀಡಿದರು.
ಉಪವಾಸ ಆಚರಿಸುತ್ತಿರುವ ಕ್ರೈಸ್ತರು ಗರಿಗಳ ಭಾನುವಾರವನ್ನು ವಿಶೇಷ ಪ್ರಾರ್ಥನೆಯ ಮೂಲಕ ಆಚರಿಸಿದರು. ಜನರು ಯೇಸುಕ್ರಿಸ್ತನನ್ನು ರಾಜಾಧಿರಾಜನೆಂದು ಘೋಷಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡಿದ ದಿನವನ್ನು ಸ್ಮರಿಸುವ ದಿನವಾಗಿ ಗರಿಗಳನ್ನು ಕ್ರೈಸ್ತ ಭಕ್ತರಿಗೆ ನೀಡಲಾಗುತ್ತದೆ. ಸುಂಟಿಕೊಪ್ಪದ
ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಧರ್ಮಗುರುಗಳಾದ ನವೀನ್ ಅವರುಗಳು ಸಂತ ಮೇರಿ ಶಾಲಾ ಮೈದಾನದಲ್ಲಿ ಧರ್ಮ ಸಂದೇಶದ ಮೂಲಕ ತೆಂಗಿನ ಗರಿಗಳನ್ನು ಆಶೀರ್ವಚಿಸಿ ಭಕ್ತರಿಗೆ ನೀಡಿದರು. ಶಾಲಾ ಆವರಣದಿಂದ ಚರ್ಚ್ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು. ನಂತರ ಬಲಿಪೂಜೆಯನ್ನು ನೆರವೇರಿಸಿ ಪವಿತ್ರ ವಾರಕ್ಕೆ ಮುನ್ನುಡಿ ಬರೆಯಲಾಯಿತು. ನೂರಾರು ಸಂಖ್ಯೆಯ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.










