ಮಡಿಕೇರಿ ಮಾ.24 NEWS DESK : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾದ ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ನಾಪೋಕ್ಲು ಭಾಗಮಂಡಲ ಮುಖ್ಯ ರಸ್ತೆಯಲ್ಲಿ ಭಾನುವಾರ ಮುಂಜಾನೆ ನಡೆಯಿತು.
ನಾಪೋಕ್ಲುವಿನಿಂದ ಭಾಗಮಂಡಲಕ್ಕೆ ತೆರಳುವ ಮುಖ್ಯ ರಸ್ತೆಯ ಚೋನಾಕೆರೆ ಎಂಬಲ್ಲಿ ರಸ್ತೆ ಬದಿಯ ತೋಟದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಮರ ಬಿದ್ದ ಪರಿಣಾಮ ರಸ್ತೆ ಬದಿಯ 5 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಚೋನಾಕೆರೆ, ಕೂರುಳಿ, ನೆಲಜಿ, ಎಮ್ಮೆಮಾಡು, ಬಲ್ಲಮಾವಟಿ, ಪೇರೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಹಾನಿಯಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬಗಳನ್ನು ಮರುಸ್ಥಾಪಿಸಿ ವಿದ್ಯುತ್ ಅಭಾವ ಉಂಟಾಗದಂತೆ ನಾಪೋಕ್ಲು ಸೆಸ್ಕ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ರಮ ಕೈಗೊಂಡರು.
ನೆಲಜಿ, ಬಲ್ಲಮಾವಟಿ, ಭಾಗಮಂಡಲಕ್ಕೆ ತೆರಳುವ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿ ಬದಲಿ ಮಾರ್ಗವಾದ ಕೂರುಳಿ, ಎಮ್ಮೆಮಾಡು ರಸ್ತೆಯನ್ನು ಬಳಸಿ ಸಂಚರಿಸಬೇಕಾಯಿತು. ಯಂತ್ರೋಪಕರಣಗಳನ್ನು ಬಳಸಿ ಮರವನ್ನು ತೆರವುಗೊಳಿಸುವ ಸಂದರ್ಭ ಗ್ರಾಮಸ್ಥರು ಸಹಕಾರ ನೀಡಿದರು.










