ಮಡಿಕೇರಿ ಮಾ.25 NEWS DESK : ಸೋಮವಾರದಿಂದ ಕೊಡಗು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನ ಯಾವುದೇ ಗೊಂದಲಗಳಿಲ್ಲದೆ ಶಾಂತ ರೀತಿಯಾಗಿ ಪರೀಕ್ಷೆ ನಡೆದಿದೆ. ಜಿಲ್ಲೆಯಲ್ಲಿ 171 ಶಾಲೆಗಳ 6121 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 6007 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ 114 ವಿದ್ಯಾರ್ಥಿಗಳು ವಿವಿಧ ಕಾರಣಗಳಿಗಾಗಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಇನ್ನು ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ತಮ್ಮ ರಿಜಿಸ್ಟರ್ ನಂಬರ್, ಕೊಠಡಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದುದು ಕಂಡು ಬಂತು. ಮಡಿಕೇರಿಯಲ್ಲಿ 8, ವಿರಾಜಪೇಟೆ 8 ಮತ್ತು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.
ಆರೋಗ್ಯ ಸೇವೆಯನ್ನು ಒದಗಿಸಲು ಅಗತ್ಯ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇನ್ನು ಎಲ್ಲಾ ಪರೀಕ್ಷಾ ಕೆಂದ್ರಗಳ ಸುತ್ತಮುತ್ತಲ 200 ಮೀಟರ್ ಪ್ರದೇಶವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿತ್ತು. ಕೇಂದ್ರಗಳ ಸುತ್ತ ಪಾರದರ್ಶಕ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಜಿಲ್ಲೆಯ ಎಲ್ಲಾ ಶಾಲೆಗಳ ಪರೀಕ್ಷಾ ಕೊಠಡಿಗಳಲ್ಲಿ ವಿಶೇಷವಾಗಿ ಈ ಬಾರಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಂದ್ರಕಾಂತ್ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಂ.ಮಹದೇವ ಸ್ವಾಮಿ ಅವರುಗಳ ಮಾರ್ಗದರ್ಶನದಲ್ಲಿ ಪರೀಕ್ಷಾ ಸಿದ್ದತೆಗಳನ್ನು ನಡೆಸಲಾಗಿತ್ತು.










