ಮಡಿಕೇರಿ ಮಾ.26 NEWS DESK: ಅಭಿವೃದ್ಧಿ ಕಾರ್ಯಗಳನ್ನು ಹೀಗೂ ಮಾಡಬಹುದು ಎಂದು ಕೊಡಗಿನ ಇಬ್ಬರು ನೂತನ ಶಾಸಕರು ಕೇವಲ 10 ತಿಂಗಳಿನಲ್ಲಿ ತೋರಿಸಿಕೊಟ್ಟಿದ್ದಾರೆ. ಶಾಸಕರೊಂದಿಗೆ ಕೈಜೋಡಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನನ್ನನ್ನು ಗೆಲ್ಲಿಸಿ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಮನವಿ ಮಾಡಿದ್ದಾರೆ.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂತನ ಶಾಸಕರುಗಳ ಆಯ್ಕೆಯಿಂದ ಕಳೆದ 20- 25 ವರ್ಷಗಳ ಕೆಟ್ಟ ಆಡಳಿತದಿಂದ ಕೊಡಗಿಗೆ ಮುಕ್ತಿ ಸಿಕ್ಕಿದೆ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೂ 10 ವರ್ಷಗಳ ಕಿಡಿ ಹೊತ್ತಿಸುವ ವ್ಯವಸ್ಥೆಗೆ ಮುಕ್ತಿ ಸಿಗಬೇಕಾಗಿದೆ. ಕೊಡಗಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜನರು ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗಿನ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ, ಎಲ್ಲಿ ನೋಡಿದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಕೇವಲ 10 ತಿಂಗಳಿನಲ್ಲಿ 350 ಕೋಟಿ ರೂ.ಗೂ ಅಧಿಕ ಅನುದಾನವನ್ನು ತಂದು ಶಂಕು ಸ್ಥಾಪನೆಗಳು ನೆರವೇರಿದೆ, ಕೆಲವು ಕಡೆ ಕಾಮಗಾರಿಯೇ ಮುಗಿದಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಯೊಂದೇ ಗುರಿಯಾಗಿದ್ದು, 10 ತಿಂಗಳಿನಲ್ಲಿ ಯಾವುದೇ ಕೋಮು ಗಲಭೆ ಸಂಭವಿಸಿಲ್ಲ. ಶಾಸಕರಾದವರು ಅಭಿವೃದ್ಧಿ ಕಾರ್ಯಗಳನ್ನು ಹೀಗೂ ಮಾಡಬಹುದು ಎನ್ನುವುದನ್ನು ಇಬ್ಬರು ಶಾಸಕರು ತೋರಿಸಿಕೊಟ್ಟಿದ್ದು, ಜನರಿಗೆ ಈಗ ಅಭಿವೃದ್ಧಿ ಎಂದರೆ ಏನು, ಶಾಸಕರೆಂದರೆ ಹೇಗಿರಬೇಕು ಎನ್ನುವುದು ಅರ್ಥವಾಗಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಸಂಸತ್ ಸದಸ್ಯನನ್ನಾಗಿ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುತ್ತಾರೆ ಎಂದು ಲಕ್ಷ್ಮಣ್ ಗೌಡ ತಿಳಿಸಿದರು. ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ಕಾಂಗ್ರೆಸ್ ಮುಖಂಡರುಗಳು ಈ ಸಂದರ್ಭ ಹಾಜರಿದ್ದರು.