ವಿರಾಜಪೇಟೆ ಮಾ.27 NEWS DESK : ಭಾರತದ ಪ್ರಜಾಪ್ರಭುತ್ವದ ಯಶಸ್ಸಿಗೆ ಯುವ ಜನತೆಯ ಪಾತ್ರ ಬಹು ಮುಖ್ಯವಾಗಿದೆ ಎಂದು ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಪವಿತ್ರ ರೈ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ, ಎನ್. ಎಸ್. ಎಸ್ ಹಾಗೂ ಮತದಾರರ ಸಾಕ್ಷರತಾ ಘಟಕಗಳ ವತಿಯಿಂದ ಜರುಗಿದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮ ಸರ್ಕಾರ ಹಾಗೂ ಮತದಾನದ ಪದ್ದತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ದ ನಡುವಿನ ವ್ಯತ್ಯಾಸವನ್ನು ತಿಳಿಸಿದ ಅವರು ಸ್ವತಂತ್ರ, ಸಮಾನತೆ, ನ್ಯಾಯ, ಬ್ರಾತೃತ್ವ ಪ್ರಜಾಪ್ರಭುತ್ವದ ಮೂಲ ಆಧಾರ ಅಂಶಗಳಾಗಿವೆ ಎಂದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರ ಸಹಕಾರ ಮುಖ್ಯವಾಗಿದ್ದು, ಪ್ರತಿಯೊಬ್ಬರು ಮತವನ್ನು ಚಲಾಯಿಸಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಇಡೀ ವಿಶ್ವವೇ ಭಾರತದ ಚುನಾವಣೆಯನ್ನು ಬಹಳ ಕುತೂಹಲದಿಂದ ನೋಡುತಿದ್ದು ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಚುನಾವಣೆಯು ಎಲ್ಲರ ಹಕ್ಕಾಗಿದ್ದು ನಮ್ಮ ಹಕ್ಕನ್ನು ನಾವು ಚಲಾಯಿಸುವುದು ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಕರ್ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿ, ನಮ್ಮ ಸಂವಿಧಾನವು ನಮಗೆ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮತದಾನದ ಹಕ್ಕನ್ನು ಕೊಟ್ಟಿದ್ದು ಪ್ರಜಾಪ್ರಭುತ್ವದ ಕಲ್ಪನೆ ಸಾಕಾರಗೊಳ್ಳಲು ಪ್ರತಿಯೊಬ್ಬರು ಮತದಾನವನ್ನು ಮಾಡಬೇಕು ಎಂದರು.
ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ ಎಂದು ಕರೆ ಕೊಟ್ಟರು.
ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಿ.ಡಿ.ಹೇಮ, ಶಶಿಕಲಾ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಸೃಜನ ದೇಚಮ್ಮ ನಿರೂಪಿಸಿದರು, ಧನ್ಯ ಸ್ವಾಗತಿಸಿದರು, ವಿದ್ಯಾರ್ಥಿನಿ ತಶ್ಮ ವಂದಿಸಿದರು.
















