NEWS DESK : ದಿನಾಂಕ 28.3.2024 ಗುರುವಾರದಂದು ಶೋಭ ಕೃತ್ಸಂವತ್ಸರಃ ಕೊನೆಯ ಸಂಕಷ್ಟಹರ ಚತುರ್ಥಿಯಾಗಿರುತ್ತದೆ. ಈ ಪಾಲ್ಗುಣ ಮಾಸದ ಸಂಕಷ್ಟಹರ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಯಾರು ಆಚರಣೆಯನ್ನು ಮಾಡುತ್ತಾರೋ, ಅವರಿಗೆ ಈ ಹಿಂದೆ ಈ ಸಂವತ್ಸರಃದಲ್ಲಿ ಬಂದ ಸಂಕಷ್ಟಹರ ವೃತಗಳನ್ನು ಮಾಡಿದ ಎಲ್ಲಾ ಫಲ ದೊರಕುತ್ತದೆ ಎಂದು ಧಾರ್ಮಿಕ ಶಾಸ್ತ್ರಕಾರರ ಸಿದ್ಧಾಂತವಾಗಿದೆ.
ಸಂಕಷ್ಟಹರ ಚತುರ್ಥಿಯನ್ನು ಗುರುಬಲ ಇಲ್ಲದವರು ಆಚರಿಸಿದರೆ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಚೌತಿಯ ಚಂದ್ರನ ನೋಡಿದವರಿಗೆ ನೋಡಿದ ದೋಷವು ಪರಿಹಾರವಾಗುತ್ತದೆ. ಯಾರಿಗೆ ಸಾಡೆಸಾಥ್ ಶನಿ ಹಾಗೂ ಶನಿದೆಸೆ ಇರುತ್ತದೆಯೋ ಅವರು ಆಚರಿಸಿದಲ್ಲಿ ಶನಿದೋಷ ಪರಿಹಾರವಾಗುತ್ತದೆ.
ಕುಜ ದೋಷದಿಂದ ವಿವಾಹ ಪ್ರತಿಬಂಧಕ ದೋಷವಿದ್ದರೆ ಸಂಕಷ್ಟಹರ ವೃತಾಚರಣೆಯಿಂದ ಶೀಘ್ರ ವಿವಾಹಯೋಗ ಕೂಡಿ ಬರುತ್ತದೆ. ಸಂತಾನ ಇಲ್ಲದವರಿಗೆ ಈ ವೃತವನ್ನು ಆಚರಿಸಿದರೆ ಶೀಘ್ರವಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ವಿದ್ಯಾ ಪ್ರಗತಿ ಇಲ್ಲದೆ ಇದ್ದಲ್ಲಿ ವೃತಾಚರಣೆಯಿಂದ ವಿದ್ಯೆ ಪ್ರಗತಿಯಾಗುತ್ತದೆ. ಉದ್ಯೋಗ ಇಲ್ಲದವರಿಗೆ ವಿಘ್ನನಾಶಕ ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡಿ ಉದ್ಯೋಗ ನೀಡುತ್ತಾರೆ.
ಈ ಎಲ್ಲಾ ಫಲವನ್ನು ಕೊಡುವ ಏಕೈಕ ವೃತವು ಹುಣ್ಣಿಮೆ ಕಳೆದ ನಾಲ್ಕು ದಿವಸಕ್ಕೆ ಅಂದರೆ ಕೃಷ್ಣ ಪಕ್ಷದ ಚತುರ್ಥಿಯಲ್ಲಿ ಪ್ರತಿ ತಿಂಗಳು ಬರುತ್ತದೆ. ಈ ವೃತವನ್ನು ಮಾಡುವವರು ವೃತದ ಮೊದಲನೆಯ ದಿನವೇ ಮನೆಯನ್ನು ಶುದ್ಧದಿಂದ ಇಡಬೇಕು, ಸಸ್ಯಹಾರ ಮಾತ್ರ ಸೇವಿಸಬೇಕು. ವೃತದ ದಿನ ಬೆಳಿಗ್ಗೆ ಬೇಗ ಎದ್ದು ತಲೆಯಿಂದ ಸ್ನಾನವನ್ನು ಮಾಡಿ ಉಪವಾಸ (ಅವರವರ ದೈಹಿಕ ಪ್ರಕೃತಿಗೆ ತಕ್ಕಂತೆ) ಇರಬೇಕು. (ಹಣ್ಣು-ಹಂಪಲು, ಎಳನೀರು ಸ್ವೀಕರಿಸಬಹುದು).
ಮೊದಲು ಕುಯ್ದಿಟ್ಟ 21 ಅಥವಾ 54 ಅಥವಾ 108 ಗರಿಕೆ ಹಾಗೂ ಕೆಂಪು ಹೂವನ್ನು ಸಂಜೆ ಸೂರ್ಯಸ್ತಕ್ಕೆ ತಲೆಯಿಂದ ಸ್ನಾನ ಮಾಡಿ ಗಣೇಶನ ದೇವಾಲಯಕ್ಕೆ ನೀಡಬೇಕು. ಗಣೇಶನಿಗೆ ಪ್ರಿಯವಾದ ನೆನೆಹಾಕಿದ ಕಡ್ಲೆ, ಎಳ್ಳು, ಪಂಚಕಜ್ಜಾಯ, ಎಳ್ಳುಂಡೆ, ಕಡುಬು ಇಂತಹ ಖಾದ್ಯವನ್ನು ಗಣೇಶನಿಗೆ ನೈವೇದ್ಯಕ್ಕೆ ಅರ್ಪಿಸಬೇಕು. ಈ ತರಹದಲ್ಲಿ ಭಕ್ತಿ ಪೂರ್ವಕವಾಗಿ ವೃತವನ್ನು ಮಾಡಿದಲ್ಲಿ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತೇನೆಂದು ಸ್ವತಃ ಗಣಪತಿಯೇ ತನ್ನ ತಾಯಿಯಾದ ಪಾರ್ವತಿ ದೇವಿಗೆ ಮಾತನ್ನು ಕೊಟ್ಟಿದ್ದಾನೆ ಎಂದು ಪುರಾಣ ಕತೆಯು ಹೇಳುತ್ತದೆ. ಕಥೆಯನ್ನು ಕೇಳಬೇಕು ನಂತರ ಚಂದ್ರನ ದರ್ಶನ ಮಾಡಿ ಸಾಥ್ವಿಕ ಆಹಾರ ಮೊಸರನ್ನವನ್ನು ಸ್ವೀಕರಿಸಬೇಕು. ಅದಕ್ಕಾಗಿ ಈ ಸರಳ ವೃತವನ್ನು ಆಚರಿಸಿ ನಮ್ಮೆಲ್ಲರ ಕಷ್ಟವನ್ನು ಪರಿಹಾರ ಮಾಡಿಕೊಳ್ಳೋಣ. ಮಾ.28ರ ಚಂದ್ರೋದಯ ರಾತ್ರಿ 9.11ಕ್ಕೆ
ಸರ್ವೆ ಜನ ಸುಖಿನೋಭವತಃ
(ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)










