ಮಡಿಕೇರಿ ಮಾ.30 NEWS DESK : ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ “ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024” ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಹಾಕಿ ಹಬ್ಬವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೊಡಗಿನ ವಿಶಿಷ್ಟ ಕೊಡವ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ, ಹಾಕಿ ಕ್ರೀಡೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿಕೊಂಡು ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯ. ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಹೆಮ್ಮೆಯ ಪ್ರತೀಕವಾಗಿದೆ ಎಂದರು.
::: ಸಂಭ್ರಮ :::
24ನೇ ವರ್ಷದ ಕ್ರೀಡಾ ಹಬ್ಬದ ಅಂಗವಾಗಿ ಬಂದೂಕಿನಿಂದ ಅಷ್ಟೇ ಸಂಖ್ಯೆಯ ಗುಂಡುಗಳನ್ನು ಆಕಾಶಕ್ಕೆ ಸಿಡಿಸಿ ಸಂಭ್ರಮಿಸಲಾಯಿತು.
ಇದಕ್ಕೂ ಮೊದಲು ನಾಪೋಕ್ಲು ಶ್ರೀ ರಾಮ ಮಂದಿರದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಬೃಹತ್ ಮೆರವಣಿಗೆ ಸಾಗಿತು. ಮೈದಾನದಲ್ಲಿ ಪಥಸಂಚಲನ, ಧ್ವಜಾರೋಹಣ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕುಂಡ್ಯೋಳಂಡ ಕುಟುಂಬದ ಪಟ್ಟೆದಾರರಾದ ಕುಂಡ್ಯೋಳಂಡ ಎ.ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಪ್ರತಿ ಮೈದಾನದಲ್ಲಿ 6 ಪಂದ್ಯಗಳಂತೆ 1 ದಿನಕ್ಕೆ 18 ಪಂದ್ಯಾಟಗಳು ನಡೆಯಲಿವೆ. 10 ದಿನಗಳ ಬಳಿಕ 2 ಮೈದಾನ, ಫ್ರೀ ಕ್ವಾಟರ್ ಹಂತದ ಬಳಿಕ 1ನೇ ಮೈದಾನದಲ್ಲಿ ಹಾಕಿ ಕ್ರೀಡಾಕೂಟಗಳು ನಡೆಯಲಿದೆ.
24ನೇ ವರ್ಷದ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಈ ಬಾರಿ 360 ಕೊಡವ ಕೌಟುಂಬಿಕ ತಂಡಗಳು ನೋಂದಣಿ ಮಾಡಿಕೊಂಡಿವೆ.
ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಸಮಿತಿಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಎಂಎಲ್‍ಸಿ ಮಂಡೇಪಂಡ ಸುಜಾ ಕುಶಾಲಪ್ಪ, ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ, ಹಾಕಿ ವಿಶ್ವ ಕಪ್ ವಿಜೇತ ಪೈಕೇರ ಈ.ಕಾಳಯ್ಯ, ಒಲಂಪಿಯನ್ ಲೆ.ಕ.ಬಾಳೆಯಡ ಕೆ.ಸುಬ್ರಮಣಿ, ಜಿಲ್ಲಾಧಿಕಾರಿ ವೆಂಕಟ್ ರಾಜ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಸೇರಿದಂತೆ ಹಲ ಹಣ್ಯರು, ಸಹಸ್ರಾರು ಹಾಕಿ ಪ್ರೇಮಿಗಳು ಪಾಲ್ಗೊಂಡಿದ್ದರು.
::: ಕ್ರೀಡಾಸ್ಫೂರ್ತಿ ಮೆರೆದ ಜಿಲ್ಲಾಧಿಕಾರಿ :::
ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ 24ನೇ ವರ್ಷದ ಕೊಡವ ಕೌಟುಂಬಿಕ ಕುಂಡ್ಯೋಳಂಡ ಹಾಕಿ ಹಬ್ಬದಲ್ಲ್ಲಿ ಜಿಲ್ಲಾಧಿಕಾರಿ ವೆಂಕಟರಾಜ ಅವರು ಸ್ಟಿಕ್ ಹಿಡಿದು ಆಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು.
ಮೂಲತಃ ರಾಜಸ್ಥಾನ ರಾಜ್ಯದವರಾದ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಅವರು, ಕುಂಡ್ಯೋಳಂಡ ಹಾಕಿ ಪಂದ್ಯಾಟದ ಪ್ರದರ್ಶನ ಪಂದ್ಯದಲ್ಲಿ ‘ಕೂರ್ಗ್ ಇಲವೆನ್’ ತಂಡವನ್ನು ಪ್ರತಿನಿಧಿಸಿ ‘ಫಾರ್ವಡ್’ ಆಟಗಾರರಾಗಿ ತಮ್ಮ ಕ್ರೀಡಾ ಸ್ಪೂರ್ತಿ ಪ್ರದರ್ಶಿಸಿದರು. ಕುಂಡ್ಯೋಳಂಡ ಹಾಕಿ ಪಂದ್ಯಾವಳಿಯ ಪ್ರದರ್ಶನ ಪಂದ್ಯದಲ್ಲಿ ಮೊದಲಾರ್ಧದವರೆಗೂ ಮೈದಾನದಲ್ಲಿ ಉಳಿದಿದ್ದ ಜಿಲ್ಲಾಧಿಕಾರಿ ವೆಂಕಟರಾಜ ಅವರು 3 ಬಾರಿ ಗೋಲ್ ಬಾರಿಸುವ ಪ್ರಯತ್ನವನ್ನೂ ನಡೆಸುವ ಮೂಲಕ ಕ್ರೀಡಾ ಸಾಮಥ್ರ್ಯ ತೋರಿದರು. ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಟಿಕ್ ಹಿಡಿದು ಮೈದಾನಕ್ಕೆ ಇಳಿದದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಳೆದ 24 ವರ್ಷಗಳಿಂದ ಕೊಡಗಿನ ವಿವಿಧ ಕಡೆಗಳಲ್ಲಿ ಕೊಡವ ಕುಟುಂಬಗಳ ನಡುವೆ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ನಡೆಯುತ್ತಿದೆ. ಪ್ರತಿ ವರ್ಷವೂ ಒಂದೊಂದು ಕುಟುಂಬಗಳು ಪಂದ್ಯಾವಳಿಗಳನ್ನೂ ಆಯೋಜಿಸುತ್ತವೆ. ಆದರೆ ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳು ಕ್ರೀಡಾ ಸಮವಸ್ತ್ರ ತೊಟ್ಟು ಮೈದಾನಕ್ಕೆ ಇಳಿದು ಆಟವಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದರು.
ಭಾರತೀಯ ಆಡಳಿತ ಸೇವೆಗೆ(ಐಎಎಸ್) ಸೇರ್ಪಡೆಯಾಗುವ ಮುನ್ನವೇ 17ರ ವಯೋಮಿತಿಯ ಒಳಗಿನ ಹಾಕಿ ಕ್ರೀಡೆಯಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲಾಧಿಕಾರಿ ವೆಂಕಟರಾಜ್ ಅವರು 19ರ ವಯೋಮಾನದ ಹಾಕಿ ಕ್ರೀಡಾ ಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
::: ರೂ. 4ಲಕ್ಷ ಬಹುಮಾನ :::
ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ ರೂ.4ಲಕ್ಷ, ದ್ವಿತೀಯ 3ಲಕ್ಷ, ತೃತೀಯ 2ಲಕ್ಷ ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ರೂ.1 ಲಕ್ಷ ನಗದು ಮಾತ್ರವಲ್ಲದೆ ಬಹುಮಾನಗಳನ್ನು ನೀಡಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹಾಕಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ.
::: ರೂ.2 ಕೋಟಿ ವೆಚ್ಚ :::
ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ರೂ.2 ಕೋಟಿ ಖರ್ಚಾಗುತ್ತಿದ್ದು, ಕುಂಡ್ಯೋಳಂಡ ಕುಟುಂಬಸ್ಥರಿಂದ ರೂ.30ಲಕ್ಷ ಸಂಗ್ರಹಿಸಲಾಗಿದೆ. ಕಳೆದ ವರ್ಷದ ಹಾಕಿ ಹಬ್ಬಕ್ಕೆ ಸರಕಾರ ರೂ.1 ಕೋಟಿ ನೀಡಿತ್ತು.
ಒಂದು ತಿಂಗಳ ಕಾಲ ಹಾಕಿ ಹಬ್ಬ ನಡೆಯಲಿದ್ದು, ಏ.28 ರಂದು ಅಂತಿಮ ಪಂದ್ಯಾಟದ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.
::: ಮುಂದಿನ ವರ್ಷ ಮುದ್ದಂಡ ಹಾಕಿ ಹಬ್ಬ :::
ಹಾಕಿ ಅಕಾಡೆಮಿಯು 2025 ರಲ್ಲಿ 25ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ.