ಮಡಿಕೇರಿ ಮಾ.30 NEWS DESK : ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ವತಿಯಿಂದ ಗೊಲ್ಲ ಜನಾಂಗ ಬಾಂಧವರ ನಡುವೆ 4ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಭಾಗಮಂಡಲ ಕಾವೇರಿ ಕಾಲೇಜು ಮೈದಾನ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಆಚೀರ ಭೀಮಯ್ಯ ಉದ್ಘಾಟಿಸಿದರು.
ಸುಮಾರು 10 ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಅತಿಥೇಯ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ತಂಡ ಮತ್ತು ಎಲೈಟ್ ಬೆಂಗ್ನಾಡ್ ತಂಡವು ಫೈನಲ್ ಪ್ರವೇಶಿಸಿ ಅಂತಿಮವಾಗಿ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಎಲೈಟ್ ಬೆಂಗ್ನಾಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಜನಾಂಗದ ಮಕ್ಕಳಿಗೆ ಆಟೋಟ ಸ್ಪರ್ಧೆ, ಮಹಿಳೆಯರಿಗೆ ಮ್ಯಾಜಿಕ್ ಬಾಕ್ಸ್ ಮತ್ತು ಪುರುಷರಿಗೆ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಆಚೀರ ಶ್ರೀ ಭೀಮಯ್ಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಉತ್ತಮ ಗುಣ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಸ್ಥಾಪಕ ಅಧ್ಯಕ್ಷ ತೊತ್ತಿಯಂಡ ಜೀವನ್ ಕುಮಾರ್ , ಸಂಘದ ಕಾರ್ಯಚಟುವಟಿಕೆಯನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನ ಪಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ದಾನಿಗಳಾದ ಬಿದ್ದಿಯಂಡ್ಡ ಮಂಜು ಪಳಂಗಪ್ಪ, ಚಿಂಗಂಡ ಪ್ರತಿನ್ ಬಿದ್ದಿಯಂಡ ಗೀತಾ, ಉದ್ದುಮಾಡಂಡ ಪ್ರತಿಶ್ ಹಾಗೂ ಅಯ್ಯಂಗೇರಿ ಶ್ರೀ ಚಿನ್ನತ್ತಪ್ಪ ದೇವಾಲಯದ ದೇವತಕ್ಕರಾದ ಬಿದ್ದಿಯಂಡ ಸುಭಾಷ್, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸದಸ್ಯರಾದ ಚೋಕಿರ ಭೀಮಯ್ಯ, ಆಚೀರ ಲವ ಚಂಗಪ್ಪ, ಕಡವಡಿರ ಸಂತೋಷ್, ನಿವೃತ್ತ ಅರಣ್ಯಾಧಿಕಾರಿ ಬಿದ್ದಿಯಂಡ ಶ್ರೀ ಪಳಂಗಪ್ಪ ಮತ್ತು ದಾನಿಗಳಾದ ಅರೆಯಂಡ ಜಯಂತಿ, ಅರೆಯಂಡ ಕಾಳಪ್ಪ, ಜನಾಂಗದ ಗಣ್ಯರು ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಬಿದ್ದಿಯಂಡ ಅಭಿಷೇಕ್ ಸ್ವಾಗತಿಸಿದರು. ಬಿದ್ದಿಯಂದ ದೀಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.