ಮಡಿಕೇರಿ ಮಾ.30 NEWS DESK : ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5 ನೇ ಸುತ್ತಿನಲ್ಲಿ ಏ.1 ರಿಂದ 30 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ತಿಳಿಸಿದ್ದಾರೆ.
ದನ, ಎಮ್ಮೆ, ಆಡು, ಕುರಿ, ಹಂದಿ, ಸೇರಿದಂತೆ ಎಲ್ಲಾ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ರೋಗವು ರೈತರಿಗೆ ಅಪಾರವಾದ ಆರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿದೆ ಎಂದರು.
ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಅಸಾಧ್ಯವಾಗಿದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು, ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು/ ಹೋರಿಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬರದಂತೆ ತಡೆಗಟ್ಟಬಹುದಾಗಿದೆ ಎಂದು ಲಿಂಗರಾಜ ದೊಡ್ಡಮನಿ ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, 70 ಲಸಿಕಾ ದಾರರನ್ನು ಒಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿದೆ. ಲಸಿಕಾದಾರರು ರೈತರ/ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದು ವಿವರಿಸಿದರು.
‘ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಕೋರಿದರು.’
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಡಿಕೇರಿ ದೂ.ಸಂ. 9448647276, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಸೋಮವಾರಪೇಟೆ ದೂ.ಸಂ.9448597496, ಸಹಾಯಕ ನಿರ್ದೇಶಕರು, ಪಶುಆಸ್ಪತ್ರೆ, ವಿರಾಜಪೇಟೆ ದೂ.ಸಂ. 9141093996, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ 9448422269 ಹಾಗೂ ಸಹಾಯಕ ನಿರ್ದೇಶಕರು, ಪಶುಆಸ್ಪತ್ರೆ, ಪೊನ್ನಂಪೇಟೆ ದೂ.ಸಂ.9449081343 ನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ತಿಳಿಸಿದರು.
ಮತ್ತಷ್ಟು ಮಾಹಿತಿ: ರೋಗಕ್ಕೆ ತುತ್ತಾಗುವ ಪ್ರಾಣಿಗಳ: ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳು. ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕಾಲುಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು.
ಕಾಲುಬಾಯಿ ರೋಗ ಹರಡುವಿಕೆ: ರೋಗಗ್ರಸ್ಥ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿ ಮುಖಾಂತರ ಪ್ರಸರಣ, ದನಗಳ ಸಂತೆ ಮತ್ತು ಜಾತ್ರೆಗಳು.
ರಾಸುಗಳ ಆರೈಕೆ: ಕಾಲು ಮತ್ತು ಬಾಯಿಯಲ್ಲಿನ ಹುಣ್ಣನ್ನು ಶೇ.0.5 ರಷ್ಟು ಅಡುಗೆ ಸೋಡ ದ್ರಾವಣದಿಂದ ಶುದ್ಧಗೊಳಿಸುವುದು, ಮೃದು ಆಹಾರವಾದ ಗಂಜಿ, ಬಾಳೆಹಣ್ಣು, ರಾಗಿ ಅಂಬಲಿ ತಿನ್ನಿಸುವುದು, ಆಂಟಿಬಯೋಟಿಕ್ಸ್ ಮತ್ತು ವಿಟಮಿನ್ ಇಂಜೆಕ್ಷನ್ ಕೊಡಿಸುವುದು.
ರೋಗ ತಡೆಯುವಿಕೆ: ರೋಗಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಉಪಚರಿಸುವುದು. ಶುಚಿತ್ವಕ್ಕೆ ಮಹತ್ವ ನೀಡಿ, ಕ್ರಿಮಿನಾಶಕ ದ್ರಾವಣವನ್ನು ಬಳಸಿ ದಿನಕ್ಕೆ 3 ರಿಂದ 4 ಬಾರಿ ಕೊಟ್ಟಿಗೆ ಮತ್ತು ಆವರಣ ಶುಚಿಗೊಳಿಸುವುದು. ರೋಗ ಪೀಡಿತ ಜಾನುವಾರುಗಳನ್ನು ಉಪಚರಿಸುವವರು ಸಹ ಇತರ ಜಾನುವಾರು ಮಾಲೀಕರ ಸಂಪರ್ಕದಿಂದ ದೂರ ಇರುವುದು. ರೋಗೋದ್ರೇಕದ ಸಂದರ್ಭದಲ್ಲಿ ಹೊಸದಾಗಿ ಜಾನುವಾರುಗಳನ್ನು ಕೊಳ್ಳುವುದು, ಜಾತ್ರೆ ಅಥವಾ ಸಂತೆಗಳಲ್ಲಿ ಮಾಲೀಕರು ಮತ್ತು ಜಾನುವಾರುಗಳು ಭಾಗವಹಿಸುವುದು ಅಸುರಕ್ಷಿತ. ಜಾತ್ರೆ ಅಥವಾ ಸಂತೆಗಳಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಕನಿಷ್ಠ 21 ದಿನಗಳ ಹಿಂದೆ ಲಸಿಕೆ ನೀಡಿದ ಪ್ರಮಾಣ ಪತ್ರ ಕಡ್ಡಾಯ.
ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಮಾರ್ಗವಾಗಿದ್ದು, ರೋಗದಿಂದ ಪೂರ್ಣ ಸುರಕ್ಷತೆಗಾಗಿ ಸತತವಾಗಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದು ಅತ್ಯಗತ್ಯ. ಆದ್ದರಿಂದ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಪ್ರತಿ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಕಟಣೆ ತಿಳಿಸಿದೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*