ಮಡಿಕೇರಿ ಏ.2 NEWS DESK : ಆಟಗಾರರು ಶಿಸ್ತು ರೂಢಿಸಿಕೊಂಡಲ್ಲಿ ಮಾತ್ರ ಉತ್ತಮ ಆಟಗಾರರಾಗಿ ಬೆಳೆಯಲು ಸಾಧ್ಯ ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯೂ ವೇಗವಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ಕೊಡಗು ಜಿಲ್ಲೆಯಲ್ಲಿ ಯುವಕರು ಫುಟ್ಬಾಲ್ ಕ್ರೀಡೆಯತ್ತ ಮುಖಮಾಡಿದ್ದಾರೆ.ಆದರೆ ಯುವ ಫುಟ್ಬಾಲ್ ಆಟಗಾರರು ತಮ್ಮ ಆಟದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಫುಟ್ಬಾಲ್ ಪಟುವಾಗಿ ಬೆಳೆಯಲು ಸಾಧ್ಯ ಎಂದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅತ್ಯುತ್ತಮವಾಗಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯವಾಳಿಯನ್ನು ಆಯೋಜಿಸಿ, ಯುವ ಫುಟ್ಬಾಲ್ ಆಟಗಾರರಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ವಿಷಯ.
ಮುಂದಿನ ವರ್ಷದಿಂದ ಕೊಡಗು ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಆಯೋಜಿಸುವಂತೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಸಲಹೆ ನೀಡಿದರು.
ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ ಮಾತನಾಡಿ, ಅಮ್ಮತ್ತಿ ಭಾಗದಲ್ಲಿ ಎಲ್ಲಾ ಕ್ರೀಡೆಗಳು ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ವಹಿಸಿದ್ದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್( ಈಶ್ವರ್), ಉಪಾಧ್ಯಕ್ಷ ಕ್ರಿಸ್ಟೋಫರ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಖಜಾಂಚಿ ದೀಪು ಮಾಚಯ್ಯ, ಸದಸ್ಯರಾದ ಲಿಜೇಶ್ ಅಮ್ಮತ್ತಿ , ಅರುಣ್ ಅಮ್ಮತ್ತಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಹಾಜರಿದ್ದರು.