ಮಡಿಕೇರಿ ಏ.4 NEWS DESK : ಕಾಳುಮೆಣಸು ಕುಯ್ಲಿಗೆ ಬಳಸಿದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಪುಷ್ಪಗಿರಿ ಎಂಬುವವರೇ ಉಸಿರು ಚೆಲ್ಲಿದವರಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ತೋಟದಲ್ಲಿ ಕರಿಮೆಣಸು ಕೊಯ್ಲಿಗೆ ಬಂದಿದ್ದ ಪುಷ್ಪಗಿರಿ, ಅಲ್ಯುಮಿನಿಯಂ ಏಣಿಯನ್ನು ಮರಕ್ಕೆ ಇಡುವಾಗ ಪಕ್ಕದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್ ಲೈನ್’ಗಳು ಕಾಫಿ ತೋಟಗಳ ನಡುವೆ ಹಾದು ಹೋಗಿದ್ದು, ತೋಟದ ಕೆಲಸದ ಸಂದರ್ಭ ಅಲ್ಯುಮಿನಿಯಂ ಏಣಿಗೆ ಬದಲಾಗಿ ಮರ, ಫೈಬರ್ ಅಥವಾ ಬಿದಿರಿನ ಏಣಿಯನ್ನು ಬಳಸುವಂತೆ ಸೆಸ್ಕ್ ಅಧಿಕಾರಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ.










