ಚಮಚ ಅಥವಾ ಫೋರ್ಕ್‌ಗಳನ್ನು ಉಪಯೋಗಿಸದೆ ನಮ್ಮ ಬೆರಳುಗಳಿಂದಲೇ ಊಟ ಮಾಡುವುದರಿಂದ ದೇಹದ ಆರೋಗ್ಯ ವೃದ್ಧಿಸುತ್ತದೆ. ಇಂದಿನ ಮಕ್ಕಳಿಗೆ ಚಮಚವಿಲ್ಲದೆ ಊಟಮಾಡಿಯೇ ಗೊತ್ತಿಲ್ಲ. ಹಿಂದೆಲ್ಲ ನಮ್ಮ ಕೈಯಲ್ಲಿಯೇ ಕಲಸಿಕೊಂಡು, ಊಟ ಮಾಡಬೇಕೆಂಬ ಪದ್ಧತಿ ಇತ್ತು. ಎಲ್ಲೋ ಅಪರೂಪಕ್ಕೆ, ಕೈಬೆರಳಿಗೆ ಗಾಯವಾಗಿದ್ದರೆ ಮಾತ್ರ ಚಮಚ ಉಪಯೋಗಿಸುವ ರೂಢಿ ಇತ್ತು. ಆದರೆ ಇಂದು ಹಾಗಿಲ್ಲ. ಕೈಯಿಂದ ಊಟಮಾಡುವುದು ಅನಾಗರಿಕ ಪದ್ಧತಿ ಎಂಬ ಭಾವನೆ ಇಂದು ಹಲವರಲ್ಲಿದೆ.
ಆಯುರ್ವೇದದ ಗ್ರಂಥಗಳ ಪ್ರಕಾರ ಕೈಯಿಂದ ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆಯಂತೆ! ಕೇಳುವುದಕ್ಕೆ ಅಚ್ಚರಿಯಾದರೂ ಇದು ಸಾಬೀತಾದ ಸತ್ಯ. ಮಾನವನ ಜೀವ ಹೇಗೆ ಪಂಚಭೂತಗಳಿಂದ ಸೃಷ್ಟಿಯಾಗಿದೆಯಲ್ಲ, ಹಾಗೇ ನಮ್ಮ ಐದೂ ಬೆರಳುಗಳು ಪಂಚಭೂತಗಳಲ್ಲಿ ಒಂದೊಂದನ್ನು ಪ್ರತಿನಿಧಿಸುತ್ತವೆ. ಹೆಬ್ಬೆರಳು ಅಗ್ನಿಯನ್ನು ಸಂಕೇತಿಸಿದರೆ, ತೋರುಬೆರಳು ಗಾಳಿಯನ್ನೂ, ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರನ್ನು ಸಂಕೇತಿಸುತ್ತದೆ. ಈ ಪಂಚಭೂತಗಳಲ್ಲಿನ ಶಕ್ತಿಯು ಬೆರಳುಗಳ ಮೂಲಕ ದೇಹದಲ್ಲಿ ಪ್ರವಹಿಸುತ್ತದೆಯಂತೆ. ಅದಕ್ಕೆಂದೇ ಕೈಯಲ್ಲಿಯೇ ಊಟಮಾಡಬೇಕು ಎನ್ನುತ್ತದೆ ಆಯುರ್ವೇದ.
ಅಷ್ಟೇ ಅಲ್ಲ, ಊಟ ಮಾಡುವಾಗ ನಾವು ಬಳಸುವ ಎಲ್ಲ ಬೆರಳುಗಳೂ ಒಂದು ಮುದ್ರೆಯಾಕಾರ ಪಡೆಯುತ್ತವೆ. ಆ ಮುದ್ರೆಗೆ ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿದೆಯಂತೆ. ಊಟ ಮಾಡುವಾಗ ಎಲ್ಲ ಬೆರಳುಗಳನ್ನೂ ಬಳಸುವುದರಿಂದ ಪಂಚಪ್ರಾಣಗಳಲ್ಲಿರುವ ಶಕ್ತಿಯು ಸಮಾನ ಪ್ರಮಾಣದಲ್ಲಿ ದೇಹವನ್ನು ಸೇರುತ್ತವೆ.
ಸ್ಪರ್ಶ, ದೇಹಕ್ಕೆ ಶಕ್ತಿಯುತ ಸಂವೇದನೆಯನ್ನು ನೀಡುತ್ತದೆ. ನಾವು ಸೇವಿಸುವ ಆಹಾರವನ್ನು ಮುಟ್ಟುತ್ತಿದ್ದಂತೆಯೇ ನಮ್ಮ ಮೆದುಳಿಗೆ ಸಂದೇಶ ಹೋಗುತ್ತದೆ. ಅದು ಆ ಆಹಾರವನ್ನು ಬಹುಬೇಗನೇ ಜೀರ್ಣಗೊಳ್ಳುವಂತೆ ಮಾಡಲು ಹೊಟ್ಟೆಗೆ ಸೂಚನೆ ನೀಡುತ್ತದೆ. ಚಮಚದಲ್ಲಿ ಊಟ ಮಾಡುವುದರಿಂದ ಸ್ಪರ್ಶದ ಸಂವೇದನೆಯಾಗುವುದಿಲ್ಲ.
ಊಟ ಮಾಡುವಾಗಲೂ ಏಕಾಗ್ರತೆ ಬೇಕು. ನಾವು ಏನನ್ನು, ಹೇಗೆ, ಎಷ್ಟು ತಿನ್ನುತ್ತೇವೆ ಎಂಬುದರ ಮೇಲೆಯೇ ದೇಹದ ಆರೋಗ್ಯ ನಿರ್ಧರಿತವಾಗುತ್ತದೆ.
ಮೂಲ: ವಿಕ್ರಮ
ಕೃಪೆ : ವಿಕಾಸ್ ಪೀಡಿಯ