ಮಡಿಕೇರಿ ಏ.10 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಅತ್ಯಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ವಿಶ್ವಾಸ ವ್ಯಕ್ತಪಡಿಸಿದೆ.
ನಗರದಲ್ಲಿ ಮೈತ್ರಿ ಪಕ್ಷಗಳ ಪ್ರಮುಖರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದೇಶದ ಸುಭದ್ರತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂದು ಜನ ಬಯಸಿದ್ದು, ಯದುವೀರ್ ಅವರು ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸುನಿಲ್ ಸುಬ್ರಮಣಿ ಮಾತನಾಡಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ- ಜೆಡಿಎಸ್ ಹೊಂದಿದೆ ಎಂದರು.
ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಮೆಚ್ಚುಗೆ ಗಳಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರುಗಳ ಅಭಿವೃದ್ಧಿಪರ ಚಿಂತನೆಗಳು ರಾಜ್ಯದ ಮೈತ್ರಿಕೂಟದ ಗೆಲುವಿಗೆ ಸಹಕಾರಿಯಾಗಲಿದೆ. 2018ರಲ್ಲಿ ಕೊಡಗಿನಲ್ಲಿ ಅತಿವೃಷ್ಟಿಯಿಂದ ಅನಾಹುತ ಸಂಭವಿಸಿದಾಗ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಕೂಡ ಕೊಡಗಿನ ಬಗ್ಗೆ ಕಾಳಜಿ ಹೊಂದಿದ್ದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಈ ಹಿಂದಿನ ಇಬ್ಬರು ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೊಡಗಿನ ಜನರಿಗೆ ಅಭಿಮಾನವಿದ್ದು, ಅಭ್ಯರ್ಥಿ ಯದುವೀರ್ ಅವರಿಗೆ ಅತ್ಯಧಿಕ ಮತಗಳನ್ನು ನೀಡಲಿದ್ದಾರೆ. ನೇಂದ್ರಮೋದಿ ಅವರು ಮತ್ತೆ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಸುನಿಲ್ ಸುಬ್ರಮಣಿ ವಿಶ್ವಾಸ ವ್ಯಕ್ತಪಡಿಸಿದರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಕಳೆದ 10 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಸಾಗಿಸಿದ್ದಾರೆ. ಮೋದಿ ಅವರ ದಕ್ಷ ಆಡಳಿತ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ನೀಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಲ್ಲಿನ ಮತದಾರರು ಯದುವೀರ್ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಯುವ ಜೆಡಿಎಸ್ ವಕ್ತಾರ ರವಿಕಿರಣ್ ರೈ ಹಾಗೂ ವಿರಾಜಪೇಟೆ ಅಧ್ಯಕ್ಷ ಮಂಜುನಾಥ್ ಪಿ.ಎಂ ಉಪಸ್ಥಿತರಿದ್ದರು.









