
ಮಡಿಕೇರಿ ಏ.13 NEWS DESK : ಬಿಜೆಪಿ ಪರಿಶಿಷ್ಟರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಎಲ್ಲಾ ವರ್ಗದವರಿಗೆ ಸಮಾನ ಅವಕಾಶಗಳನ್ನು ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುತ್ತದೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟರ ಬಹುಪಾಲು ಮತಗಳು ಕಾಂಗ್ರೆಸ್ ಪಾಲಾಗಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಜೆಪಿ ಪರಿಶಿಷ್ಟರಿಗಾಗಿ ನೀಡಿದ ಕೊಡುಗೆ ಏನು ಎನ್ನುವುದನ್ನು ಆ ಪಕ್ಷದ ಮುಖಂಡರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಬಿಜೆಪಿ ಸಂವಿಧಾನ ವಿರೋಧಿಯಾಗಿದೆ, ಬಡವರ ಪಾಲಿಗೆ ಇಲ್ಲದಂತಾಗಿದ್ದು, ಶ್ರೀಮಂತರ ಪರವಾಗಿದೆ. ಇದರ ನಡುವೆಯೇ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷರು ತಮ್ಮ ಪಕ್ಷದ ಪರ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಪಕ್ಷದಲ್ಲಿ ಅವರ ಸ್ಥಾನಮಾನ ಏನು ಎಂಬುವುದನ್ನು ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷರು ಅರ್ಥಮಾಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಹೆಚ್.ಬಿ.ಜಯಮ್ಮ, ರಾಜಮ್ಮ, ಪಾಪುಸಣ್ಣಯ್ಯ ಸೇರಿದಂತೆ ಹಲವರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿ ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಸಿದೆ. ಆದರೆ ಬಿಜೆಪಿ ಪಕ್ಷ ಮೊಗೇರ ಸಮಾಜದ ಮುಖಂಡ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಗೌತಮ್ ಶಿವಪ್ಪ ಸೇರಿದಂತೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದೆ ಎಂದು ಟೀಕಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಪವಿತ್ರ ಸಂವಿಧಾನದ ಮೂಲಕ ದೇಶದ ಬಹುಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ. ಇಂತಹ ಸಂವಿಧಾನವನ್ನು ಬದಲಾಯಿಸುವುದಾಗಿ ಬಿಜೆಪಿ ಹೇಳುತ್ತಿದೆ. ಈ ರೀತಿಯ ಅಜಾಂಡವನ್ನು ಹೊಂದಿರುವ ಬಿಜೆಪಿಗರಿಗೆ ಡಾ.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಕೇವಲ ಸುಳ್ಳುಗಳನ್ನು ಹೇಳುವುದೇ ಮೋದಿ ಗ್ಯಾರಂಟಿಯಾಗಿದ್ದು, ದೇಶದಲ್ಲಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿದ್ದರು, ಇಲ್ಲಿಯವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ, ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿ ಮಾಡುವ ಬದಲಾಗಿ ಇದ್ದಂತಹ ಉದ್ಯೋಗವನ್ನು ಕಿತ್ತುಕೊಳ್ಳಲಾಗಿದೆ ಎಂದು ಟೀಕಿಸಿದರು.
ಆದರೆ ಕಾಂಗ್ರೆಸ್ ಸರಕಾರ ಉಳುವವನೇ ಭೂಮಿಯ ಒಡೆಯ ಎಂಬ ಮಸೂದೆಯನ್ನು ತರುವ ಮೂಲಕ ಬಡವರ ಪರವಾಗಿ ಕೆಲಸ ಮಾಡಿದೆ. ಬಿಜೆಪಿ ಬಡವರ ಪರವಾಗಿ ಯಾವುದಾದರು ಮಸೂದೆಯನ್ನು ಜಾರಿಗೆ ತಂದಿದೆಯೇ ಎಂದು ಪ್ರಶ್ನಿಸಿದ ಸುರೇಶ್ ಅವರು, ಇದನ್ನೆಲ್ಲ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷರು ಅರಿತುಕೊಳ್ಳಲಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಈ ಬಾರಿ ಕಾಂಗ್ರೆಸ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರಮುಖ ಗ್ಯಾರಂಟಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಜನರ ವಿಶ್ವಾಸಗಳಿಸಿದೆ ಮತ್ತು ಬದುಕನ್ನು ಹಸನಗೊಳಿಸುತ್ತಿದೆ ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದಲಿತರು ನಿರ್ಣಾಯಕ ಮತದಾರರಾಗಿದ್ದಾರೆ. ಈಗಾಗಲೇ ದಲಿತ ಸಂಘಟನೆಗಳು ಬಹಿರಂಗವಾಗಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದು, ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರ ಗೆಲವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜೆ.ಎಲ್.ಜನಾರ್ಧನ್ ಮಾತನಾಡಿ, ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಸರಕಾರ ಅಧಿಕಾರಕ್ಕೆ ಬಂದ ಕೇವಲ 9ತಿಂಗಳುಗಳಲ್ಲಿ 500 ಕೋಟಿ ರೂ.ಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಿಂದೆಂದೂ ಕಾಣದಷ್ಟು ವೇಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಶಾಸಕರು ಜನಪ್ರಿಯರಾಗುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮಂದಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ. ಜನಪರವಾದ ಐದು ಗ್ಯಾರಂಟಿಗಳಿಗೆ ಜನ ಬೆಂಬಲ ನೀಡುತ್ತಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ಜನರ ಹಾದಿ ತಪ್ಪಿಸುವುದಕ್ಕಾಗಿ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಆದರೆ ಈ ಬಾರಿ ಕೂಡ ದಲಿತರ ಹೆಚ್ಚು ಮತಗಳು ಕಾಂಗ್ರೆಸ್ ಪಾಲಾಗಲಿದ್ದು, ಎಂ.ಲಕ್ಷ್ಮಣ ಗೌಡ ಅವರು ಜಯಭೇರಿ ಬಾರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ಆರ್.ಪಿ.ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ವಿ.ಸಂದೀಪ್ ಹಾಗೂ ಸೇವಾದಳದ ಸದಸ್ಯೆ ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು.








