ಮಡಿಕೇರಿ ಏ.13 NEWS DESK : ಕಾಡುಕೋಣವನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿ ಕತ್ತರಿಸಿ ಸಾಗಿಸಿದ ಆರೋಪದಡಿ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಮಹಮ್ಮದ್ ಜಾಬೀರ್(29) ಹಾಗೂ ನೌಫಲ್(24) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಳಿಯಿಂದ ಒಂದು ಮಾರುತಿ ಓಮಿನಿ ಕಾರು ಮತ್ತು ಎರಡು ಮೊಬೈಲ್ ಫೋನ್’’ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ ವಲಯ ವ್ಯಾಪ್ತಿಯ ಮಾಲ್ದಾರೆ ಶಾಖೆಯ ಮಾಲ್ದಾರೆ ಗಸ್ತಿನ ಪಿರಿಯಾಪಟ್ಟಣ-ಸಿದ್ದಾಪುರ ರಸ್ತೆಯಂಚಿನಲ್ಲಿ ಕಾಡುಕೋಣವೊಂದವನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿ ಕತ್ತರಿಸಿಕೊಂಡು ಸಾಗಿಸಿರುವ ಸಂಬಂಧ ಮಾ.14ರಂದು ಪ್ರಕರಣ ದಾಖಲಾಗಿತ್ತು. ಅಲ್ಲದೆ ಮಾ.24 ರಂದು ಆನೆಚೌಕೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಕಾಡುಕೋಣವನ್ನು ಹತ್ಯೆ ಮಾಡಿ ಮಾಂಸ ಮಾಡಿ ಸಾಗಿಸಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದರು.
ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿಯನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಿ ವೀರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.










