


ಮಡಿಕೇರಿ. ಏ.13 NEWS DESK : ಕೊಡಗು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಡಿಸಿ-XI ಮತ್ತು ಜಿಲ್ಲೆಯ ಪತ್ರಕರ್ತರ ತಂಡದ ಪ್ರೆಸ್-XI ನಡುವೆ 8 ಓವರ್ ಗಳ ಪಂದ್ಯಾವಳಿ ನಡೆಯಿತು.
ಪಂದ್ಯ ಆರಂಭಕ್ಕೂ ಮುನ್ನ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಚುನಾವಣೆಯಂತಹ ಪ್ರಜಾಪ್ರಭತ್ವದ ಹಬ್ಬದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಮತದಾನ ಮಾಡುವವರು ಎಂದಿಗೂ ಚಾಂಪಿಯನ್ ಇದ್ದಂತೆ ಎಂದು ಬಣ್ಣಿಸಿದರು.
ನೈತಿಕ ಮತದಾನಕ್ಕಾಗಿ ಪತ್ರಕರ್ತರ ಸಹಕಾರವೂ ಅಗತ್ಯ. ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡಿಸಿ-XI ತಂಡ ಉತ್ತಮ ಬೌಲಿಂಗ್ ದಾಳಿ ಪ್ರದರ್ಶಿಸಿತು. ಪ್ರೆಸ್- XI ತಂಡವು ನಿಗದಿತ 8 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 68 ರನ್ ಗಳ ಸವಾಲಿನ ಗುರಿ ನೀಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಡಿಸಿ-XI ತಂಡವು 7 ವಿಕೆಟ್ ಕಳೆದುಕೊಂಡು 60 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಬೌಲಿಂಗ್ ದಾಳಿಯೊಂದಿಗೆ ಮಂಜು ಅವರ ನಾಯಕತ್ವದ ಪ್ರೆಸ್-XI ತಂಡ ರೋಚಕ ಜಯ ಸಾಧಿಸಿತು.
ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ ನಾರ್ವೇ, ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ ಹಾಜರಿದ್ದರು.
ಮತದಾನ ಮಾಡುವ ಮೂಲಕ ನಾನೂ ಕೂಡ ಚಾಂಪಿಯನ್ ಎಂಬ ಸಂದೇಶವನ್ನು ಸಾರ್ವಜನಿಕರಲ್ಲಿ ಮೂಡಿಸಲಾಯಿತು. ಏ.26 ರಂದು ತಪ್ಪದೇ ಮತ ಚಲಾಯಿಸುವಂತೆ ತಿಳಿಸಲಾಯಿತು.