
ಮಡಿಕೇರಿ ಏ.15 NEWS DESK : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಡೀ ಮಹಿಳಾ ಸಮೂಹಕ್ಕೆ ಹಾಗೂ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ನಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಮಹಿಳೆಯರ ಸ್ವಾವಲಂಬನೆಗಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿಗಳನ್ನು ಘೋಷಿಸಿತು ಮತ್ತು ಅಧಿಕಾರಕ್ಕೆ ಬಂದೊಡನೆ ಅದನ್ನು ಜಾರಿಗೆ ತಂದಿದೆ. ಇದು ತಾಯಂದಿರ ಮನೆ ಬೆಳಗಬೇಕೆನ್ನುವ ಚಿಂತನೆಯಿಂದ ರೂಪಿಸಿದ ಯೋಜನೆಗಳಾಗಿದೆ ಎಂದರು.
ಮಹಿಳೆಯರ ಬದುಕನ್ನು ಹಸನಾಗಿಸುವ, ಅವರ ಮನೆಗಳನ್ನು ಬೆಳಗುವ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ನನ್ನನ್ನು ಅತ್ಯಂತ ದುಃಖಿತನನ್ನಾಗಿ ಮಾಡಿದೆ. ಅವರ ಹೇಳಿಕೆ ಇಡೀ ಮನುಕುಲಕ್ಕೆ ಮಾಡಿರುವ ಅಪಮಾನವೆಂದು ಹೇಳಿದರು.
ಬದುಕನ್ನು ಬದಲಿಸುವ ಪಂಚ ಗ್ಯಾರಂಟಿಗಳ ಪ್ರಯೋಜನವನ್ನು ರಾಜ್ಯದ 1.20 ಕೋಟಿ ಮಹಿಳೆಯರು ಇಂದು ಪಡೆದುಕೊಳ್ಳುತ್ತಿದ್ದಾರೆ. ಇವರೆಲ್ಲ ದಾರಿ ತಪ್ಪುತ್ತಿದ್ದಾರ ಕುಮಾರಸ್ವಾಮಿಯವರೇ ಎಂದು ಕಟುವಾಗಿ ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಇದಕ್ಕೆ ಮಹಿಳೆಯರಿಂದಲೇ ತಕ್ಕ ಉತ್ತರ ದೊರೆಯಲಿದೆ ಎಂದು ತಿಳಿಸಿದರು.
“ಕಮಲ ಕೆರೆಯಲ್ಲಿರಬೇಕು, ತೆನೆ ಹೊಲದಲ್ಲಿರಬೇಕು ಮತ್ತು ದಾನ ಧರ್ಮಗಳನ್ನು ಮಾಡುವ ಕೈ ಅಧಿಕಾರದಲ್ಲಿರಬೇಕು” ಎಂದ ಡಿಕೆಶಿ, ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಇಂದು ಅತ್ಯಂತ ವಿಶ್ವಾಸದಿಂದ ನಿಮ್ಮ ಮುಂದೆ ನಿಂತಿದ್ದೇವೆಂದು ಎಂದರು.
ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸಿದೆ, ಬಿಜೆಪಿ ತಾನು ನುಡಿದಂತೆ ನಡೆದುಕೊಂಡಿದೆಯೇ, ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿ ಪ್ರಜೆಗಳ ಖಾತೆಗೆ 15 ಲಕ್ಷ ರೂ. ಹಾಕಲಾಗಿದೆಯೇ, ರೈತರ ಆದಾಯ ದುಪ್ಪಟ್ಟು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಆಗಿದೆಯೇ ಎಂದು ಪ್ರಶ್ನಿಸಿದ ಡಿಕೆಶಿ, ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ್ರ ಸರ್ಕಾರ ಕೊಟ್ಟಮಾತನ್ನು ಉಳಿಸಿಕೊಂಡಿಲ್ಲವೆಂದು ಗೇಲಿ ಮಾಡಿದರು.
ಭರವಸೆ ಮತ್ತು ಈಡೇರಿಕೆಗಳ ನಡುವೆ ಕೇವಲ ನಾಲ್ಕು ಬೆರಳಿನ ಅಂತರವಷ್ಟೆ ಇರುವುದು. ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಗಳು ಈಡೇರುವ ಮೂಲಕ ಅವುಗಳು ನಮ್ಮ ಕಣ್ಣ ಮುಂದೆ ಇವೆಯಾದರೆ, ಬಿಜೆಪಿ ನೀಡಿದ ಭರವಸೆಗಳು ಕೇವಲ ಕಿವಿಯ ಮೇಲಷ್ಟೆ ಇದೆ ಎಂದರು.
ಜಾತ್ಯತೀತ ಪಕ್ಷವೆನ್ನುತ್ತಿದ್ದ ಜೆಡಿಎಸ್ ಇಂದು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ‘ಆ ಪಾರ್ಟಿ ಹೋಯ್ತು’ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಮಹಿಳೆಯರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗ್ಯಾರಂಟಿ ಯೋಜನೆಯ ಪ್ರಯೋಜನ ಲಭಿಸಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೂ ತಲುಪಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು. ಕಳೆದ 10 ತಿಂಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದರು.
ದ್ವೇಷದ ರಾಜಕೀಯ ಬಿಜೆಪಿಯ ಕೊಡುಗೆಯಾಗಿದೆ, ಕಾಂಗ್ರೆಸ್ ಸದಾ ಪ್ರೀತಿಯ ರಾಜಕೀಯ ಮಾಡುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಮಾನವ ಪ್ರೇಮಿಯಾಗಿದ್ದಾರೆ. ಮಾನವೀಯತೆಯಿಂದ ಕಾಂಗ್ರೆಸ್ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತದೆ. ಜಾತಿ- ಧರ್ಮದಲ್ಲಿ ತಾರತಮ್ಯ ಮಾಡದೇ ಎಲ್ಲರನ್ನೂ ಒಂದಾಗಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಗಿನಿಂದ ಉತ್ತಮ ಮುನ್ನಡೆಯನ್ನು ಒದಗಿಸುವ ಮೂಲಕ ಅವರ ಗೆಲುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದರು.
ಪ್ರಸ್ತುತ ಈ ಕ್ಷೇತ್ರದಲ್ಲಿ ಯಾವುದೇ ಮೋದಿ ಹವಾ ನಡೆಯುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಗ್ಯಾರಂಟಿ ನಡೆಯುತ್ತಿದೆ ಎಂದರು.
ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಚಿವರುಗಳಾದ ಡಾ. ಹೆಚ್.ಸಿ.ಮಹದೇವಪ್ಪ, ವೆಂಕಟೇಶ್ ಹಾಗೂ ಮಾಜಿ ಸಚಿವರುಗಳಾದ ಎಂ.ಸಿ.ನಾಣಯ್ಯ, ಸುಮಾವಸಂತ್, ಮಾಜಿ ಎಂಎಲ್‍ಸಿಗಳಾದ ಅರುಣ್ ಮಾಚಯ್ಯ, ವೀಣಾಅಚ್ಚಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಚುನಾವಣಾ ಉಸ್ತುವಾರಿ ವಿನಯ ಕುಮಾರ್ ಸೊರಕೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.








