
ಮಡಿಕೇರಿ ಏ.16 NEWS DESK : ಬಿಜೆಪಿ ದೇಶದ ಅಭಿವೃದ್ಧಿ ಮತ್ತು ಭದ್ರತೆಯ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದರೆ, ಕಾಂಗ್ರೆಸ್ ಮಂದಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಜಾತಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯದ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಗುರಿಯನ್ನು ಮತದಾರರು ಹೊಂದಿದ್ದಾರೆ. ಆದರೆ ಕೊಡಗಿನಲ್ಲಿ ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಕೆಲವು ಪ್ರಮುಖರು ಜನಾಂಗದ ಮತವನ್ನು ಕಾಂಗ್ರೆಸ್‍ಗೆ ನೀಡಬೇಕು ಎಂದು ಕರೆ ನೀಡುತ್ತಿದ್ದಾರೆ. ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನ ಮಂದಿ ರೈತ ಸಮೂಹಕ್ಕೆ ಸೇರಿದವರಾಗಿದ್ದಾರೆ. ಪ್ರಧಾನಿ ಮೋದಿ ಅವರು ರೈತರಿಗೆ ನೀಡಿರುವ ಕೊಡುಗೆಯನ್ನು ಯಾರೂ ಮರೆತಿಲ್ಲ. ಈ ಸಮುದಾಯ ಮೋದಿ ಅವರ ಮೇಲೆ ಒಲವು ಹೊಂದಿದ್ದು, ಕಾಂಗ್ರೆಸ್ ಗೆ ಮತ ಚಲಾಯಿಸುವುದಿಲ್ಲ ಎಂದರು.
ಸೇನೆಯಲ್ಲಿ ಅರೆಭಾಷೆ ಗೌಡ ಹಾಗೂ ಒಕ್ಕಲಿಗ ಸಮುದಾಯದ ಜನ ಇದ್ದಾರೆ. ಸೇನೆಗಾಗಿ ಪ್ರಧಾನಿ ಮೋದಿ ಅವರು ಏನು ಕೊಡುಗೆ ನೀಡಿದ್ದಾರೆ ಎಂಬ ಅರಿವು ಅವರಿಗಿದೆ. ಜಾತಿಗಾಗಿ ಮತ ಹಾಕಿ ಎಂಬ ನಾಯಕರ ಮಾತನ್ನು ಯಾರೂ ಕೇಳುವುದಿಲ್ಲ. ಕಾಂಗ್ರೆಸ್ ಅರೆಭಾಷೆ ಹಾಗೂ ಒಕ್ಕಲಿಗ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಹೇಶ್ ಜೈನಿ ಹೇಳಿದರು.
ಪ್ರತಾಪಸಿಂಹ ಅವರು ಚುನಾವಣೆಗೆ ನಿಂತಾಗ ಇವರ ಜಾತಿ ಪ್ರೇಮ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ ಅವರು, ಯಾವುದೇ ವ್ಯಕ್ತಿ ಸಮುದಾಯವನ್ನು ಪ್ರತಿನಿಧಿಸುವಾಗ ಆಚಾರ ವಿಚಾರ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಬೇಕೆ ಹೊರತು ರಾಜಕೀಯ ಮಾಡಬಾರದು. ಒಂದು ಪಕ್ಷವನ್ನು ಒಲೈಸುವುದಾದರೆ ಆ ಪಕ್ಷದಲ್ಲಿ ಗುರುತಿಸಿಕೊಂಡು ಪ್ರಚಾರ ನಡೆಸಲಿ ಎಂದರು.
ನರೇಂದ್ರ ಮೋದಿ ಅವರು ದೇಶದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ರಾಜಮನೆತನದವರಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಜನ ಪ್ರಜ್ಞಾವಂತರಾಗಿದ್ದು, ಕಾಂಗ್ರೆಸ್‍ನ ಆಮಿಷಗಳಿಗೆ ಬಲಿಯಾಗದೆ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ತಳೂರ್ ಕಿಶೋರ್ ಕುಮಾರ್ ಮಾತನಾಡಿ, ಅರೆಭಾಷೆ ಗೌಡರಿಗೆ ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಕೊಡಗಿನಲ್ಲಿಯೂ ಉನ್ನತ ಸ್ಥಾನಮಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಕಾರ್ಯಕರ್ತರನ್ನು ಉನ್ನತ ಸ್ಥಾನದಲ್ಲಿ ಗುರುತಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಒಂದು ಜಾತಿ, ವರ್ಗಕ್ಕೆ ಸಿಮೀತವಾದ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.
::: ಗೌಡರ ಭೇಟಿ :::
ಏ.18ರಂದು ಜಿಲ್ಲೆಗೆ ಸದಾನಂದ ಗೌಡರು ಭೇಟಿ ನೀಡಲಿದ್ದು, ಕುಶಾಲನಗರ, ಶಾಂತಳ್ಳಿ, ಬೆಟ್ಟಗೇರಿ ಹಾಗೂ ಭಾಗಮಂಡಲದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಏ.19 ರಂದು ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಮಡಿಕೇರಿಯ ಮಹದೇವಪೇಟೆಯಿಂದ ರೋಡ್ ಶೋ ಮಾಡಲಿದ್ದಾರೆ. ಅಲ್ಲದೆ ಏ.17 ರಂದು ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಯದುವೀರ್ ಅವರು ಸಂಸದರಾಗಬೇಕು ಹಾಗೂ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸುವುದಾಗಿ ಕಿಶೋರ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾಂಗೀರ ಸತೀಶ್, ನಗರ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ, ಬೆಟ್ಟಗೇರಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಹಾಗೂ ಪ್ರಮುಖರಾದ ಬೆಪ್ಪುರನ ಮೇದಪ್ಪ ಉಪಸ್ಥಿತರಿದ್ದರು.








