
ಮಡಿಕೇರಿ ಏ.16 NEWS DESK : ಕೊಡವ ಹೊಸ ವರ್ಷಾಚರಣೆ ಎಡಮ್ಯಾರ್ ನ ಎರಡನೇ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಕೊಡವರ ನರಮೇಧದ ಸ್ಮಾರಕ ಸ್ಥಳದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರಿಗೆ ಪುಷ್ಪನಮನ ಸಲ್ಲಿಸಿದ ಪ್ರಮುಖರು ಆದಿಮಸಂಜಾತ ಕೊಡವ ಬುಡಕಟ್ಟು ಜನರ ಸಮಗ್ರ ಸಬಲೀಕರಣಕ್ಕಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವರು ಹಾಗೂ ಕೊಡವಲ್ಯಾಂಡ್ ಪರವಾದ ಬೇಡಿಕೆಗಳು ಶೀಘ್ರ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
32 ಬಾರಿ ರಾಜ್ಯವನ್ನು ರಕ್ಷಿಸಿದ ಕೊಡವ ಬುಡಕಟ್ಟು ಸೈನಿಕರ ಮೇಲೆ ಸೋಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಟಿಪ್ಪು ಮೋಸದಿಂದ ದಾಳಿ ಮಾಡಿದ ಪರಿಣಾಮ ಸಹಸ್ರ ಸಹಸ್ರ ಕೊಡವರು ಈ ಕೊಡವ ಭೂಮಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಎಡಮ್ಯಾರ್ ಹೊಸ ವರ್ಷಾಚರಣೆ ಸಂದರ್ಭ ಅಗಲಿದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಗೌರವಿಸುವುದು ಕೊಡವರಾದ ನಮ್ಮ ಕರ್ತವ್ಯವಾಗಿದೆ ಎಂದರು.
ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕುಗಳು ಹಾಗೂ ಕೊಡವರಿಗೆ ಎಸ್‌ಟಿ ಟ್ಯಾಗ್ ಸಿಗಬೇಕೆನ್ನುವ ಹೋರಾಟಕ್ಕೆ ಹಿರಿಯರ ಆಶೀರ್ವಾದವನ್ನು ಕೋರಲಾಯಿತು ಎಂದು ನಾಚಪ್ಪ ತಿಳಿಸಿದರು.
ಪ್ರಮುಖರಾದ ಮಂದಪಂಡ ಮನೋಜ್, ಚೀಯಬೇರ ಸತೀಶ್, ಮಂದಪಂಡ ಸೂರಜ್ ಮತ್ತಿತರರು ಪುಷ್ಪನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









