
ಸಿದ್ದಾಪುರ ಏ.17 NEWS DESK : ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸುತ್ತಿದೆ.
ಹಾಡಗಲಿನಲ್ಲೇ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು, ಕಾರ್ಮಿಕರು ತೋಟಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬಾರೆ, ಅವರೆಗುಂದ, ಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಅರಣ್ಯ ಯಾವುದೇ ಅಡೆತಡೆ ಇಲ್ಲದೆ ಬರುವ ಕಾಡಾನೆಗಳು ಕಾಫಿ ತೋಟಗಳಲ್ಲೇ ಬಿಡು ಬಿಡುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿಯಿಂದ ಕಾಫಿ, ಮೆಣಸು, ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರಕೃಷಿ ಫಸಲನ್ನು ಅಪಾರ ಪ್ರಮಾಣದಲ್ಲಿ ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಯೋಜನೆಯನ್ನ ರೂಪಿಸದೆ ನಿರ್ಲಕ್ಷ ತೋರುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ಕಾಫಿ ತೋಟ ಹಾಗೂ ಗ್ರಾಮಗಳತ್ತ ಮುಖ ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದರು.
ಸಿದ್ದಾಪುರ ಕರಡಿಗೋಡು ರಸ್ತೆಯ ಸರಳ ಎಂಬವರಿಗೆ ಸೇರಿದ ಒಂದು ಎಕರೆ ಜಾಗದಲ್ಲಿ ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರ ಕೃಷಿ ಫಸಲುಗಳನ್ನು ಕಾಡಾನೆಗಳ ಹಿಂಡು ಫಸಲುಗಳನ್ನ ನಾಶಪಡಿಸಿವೆ. ಕೃಷಿಯನ್ನು ನಂಬಿ ಜೀವನ ನಡೆಸುತ್ತಿರುವ ಕುಟುಂಬವು
ಕಾಡಾನೆಗಳ ಹಾವಳಿಯಿಂದ ಕಂಗಲಾಗಿದ್ದಾರೆ.
ವರ್ಷವಿಡಿ ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳು ಕಾಡುಪ್ರಾಣಿಗಳ ಪಾಲಾಗುತ್ತಿದ್ದು, ಅಂದಾಜು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಡು ಪ್ರಾಣಿಗಳನ್ನು ಶಾಶ್ವತವಾಗಿ ತಡೆಗಟ್ಟುವ ಮೂಲಕ ಕೃಷಿ ಪಸಲಿಗೆ
ಕೂಡಲೇ ಪರಿಹಾರ ನೀಡಬೇಕೆಂದು ಕೃಷಿಕ ಮಂಜೇಶ್ ಅರಣ್ಯ ಇಲಾಖೆಯನ್ನ ಒತ್ತಾಯಿಸಿದ್ದಾರೆ.







