ಕುಶಾಲನಗರ ಏ.17 NEWS DESK : ಕುಶಾಲನಗರ ತಾಲ್ಲೂಕಿನ ಪ್ರಮುಖ ಪುಣ್ಯ ಕ್ಷೇತ್ರವಾದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಶ್ರೀ ರಾಮನು ಮರಳಿನಿಂದ ಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನಿಂದ ಧಾವಿಸಿರುವ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿತು.
ಮಧ್ಯಾಹ್ನ ಒಂದು ಗಂಟೆಯ ಅಭಿಜಿನ್ ಲಗ್ನದಲ್ಲಿ ರಥಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನಾ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆಯಲ್ಲಿ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.
ರಥ ಸಾಗುತ್ತಿದ್ದಂತೆಯೇ ದೇವಾಲಯದ ಆವರಣದಲ್ಲಿ ನೆರೆದಿದ್ದ ಅನೇಕ ಭಕ್ತರು ಬಾಳೆ ಹಣ್ಣು ಹಾಗೂ ಜವುನಗಳನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದುದು ಕಂಡು ಬಂತು.
ದೇವಾಲಯದಿಂದ ಹೊರಟ ರಥ ಗ್ರಾಮದ ಅರಳೀಕಟ್ಟೆಯವರೆಗೂ ಸಾಗಿತು. ಬಳಿಕ ಸಂಜೆ ಸ್ವಸ್ಥಾನಕ್ಕೆ ತರಲಾಯಿತು.
ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾಧಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿದರು.
ಆಕರ್ಷಿಸಿದ ಕಲಾ ತಂಡಗಳು :
ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಕಾಶಿಯ ತೀರ್ಥವನ್ನು ತಂದ ಸಂದರ್ಭ ಕಣಿವೆ ಗ್ರಾಮದ ಪ್ರವೇಶ ದ್ವಾರ ರಾಂಪುರದಲ್ಲಿ ತೋರಣಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ಇದೇ ಸಂದರ್ಭ ಚಂಡೇ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು.
ಭಕ್ತರನ್ನು ಆಕರ್ಷಿಸಿದ ತೂಗುಸೇತುವೆ :
ಕಣಿವೆ ರಥೋತ್ಸವಕ್ಕೆ ಇಲ್ಲಿನ ಕಾವೇರಿ ನದಿಯ ಮೇಲೆ ನಿರ್ಮಿಸಿರುವ ತೂಗುಸೇತುವೆ ಭಕ್ತರನ್ನು ಆಕರ್ಷಿಸಿತು.
ನೀರೇ ಇಲ್ಲದ ಖಾಲಿ ನದಿಯನ್ನು ತೂಗು ಸೇತುವೆ ಮೇಲಿಂದ ನೋಡಿದ ಭಕ್ತರು ಸೆಲ್ಫಿ ತೆಗೆದುಕೊಂಡರು.
ಮೂರು ಜಿಲ್ಲೆಗಳ ಸಂಗಮ :
ಕಣಿವೆಯ ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತರೂ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಆಗಮಿಸುವುದು ಪ್ರತೀತಿ.
ಪೋಲೀಸರ ಕಾವಲು :
ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರನ್ನು ನೂಕುನುಗ್ಗಲಿನಲ್ಲಿ ಜೇಬಿಗೆ ಕನ್ನ ಹಾಕಲು ಹೊಂಚು ಹಾಕಿದ್ದ ಕಳ್ಳರಿಗೆ ಪೋಲೀಸರ ಕಾವಲು ಎಚ್ಚರಿಕೆ ನೀಡಿದಂತಿತ್ತು.
ಮಹಿಳಾ ಭಕ್ತರಿಗೆ ಚಿನ್ನಾಭರಣಗಳ ಮೇಲೆ ನಿಗಾವಹಿಸುವಂತೆ ಮೈಕ್ ನಲ್ಲಿ ಎಚ್ಚರಿಸುತ್ತಿದ್ದುದು ಕೇಳಿ ಬಂತು.
ಭಕ್ತರಿಗೆ ಅನ್ನದಾನ :
ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ಆಯೋಜನೆಗೊಂಡಿದೆ.
ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯಧ್ಯಕ್ಷ ಕೆ.ಎಸ್.ಮಾಧವ, ಕಾರ್ಯದರ್ಶಿ ಟಿ.ಎನ್.ಶೇಷಾಚಲ,ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್.ಮಹೇಶಕುಮಾರ್, ಇ.ಎಸ್.ಗಣೇಶ್, ಕೆ.ಎಂ.ರಾಕೇಶ್, ಟಿ.ಎಂ.ಕಾರ್ತಿಕ್, ಕೆ.ಸಿ.ನಂಜುಂಡಸ್ವಾಮಿ, ಅರ್ಚಕ ರಾಘವೇಂದ್ರ ಆಚಾರ್, ಉದಯಪ್ರಕಾಶ್ ಒಳಗೊಂಡಂತೆ ದೇವಾಲಯ ಸಮಿತಿ ಪದಾಧಿಕಾರಿಗಳಿದ್ದರು.
ವರದಿ : ಕೆ.ಆರ್.ಗಣೇಶ








