
ಮಡಿಕೇರಿ ಏ.17 NEWS DESK : ಮತ ಚಲಾಯಿಸುವುದು ಅವರವರ ವೈಯುಕ್ತಿಕ ವಿಚಾರವಾಗಿದೆ. ಅನಗತ್ಯವಾಗಿ ಗೊಂದಲದ ಹೇಳಿಕೆಯನ್ನು ನೀಡಿ ಅರೆಭಾಷಿಕರನ್ನು ಇಕ್ಕಟ್ಟಿಗೆ ದೂಡುವ ಕೆಲಸವನ್ನು ಬಿಜೆಪಿಯ ಅರೆಭಾಷಿಕ ಮಿತ್ರರು ಮಾಡಕೂಡದು ಎಂದು ಕೊಡಗು ಗೌಡ ವಿದ್ಯಾ ಸಂಘದ ನಿರ್ದೇಶಕ ಸೂದನ ಎಸ್.ಈರಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಸಚಿವ ವೆಂಕಟೇಶ್ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಕೊಡಗು ಗೌಡ ವಿದ್ಯಾಸಂಘದಲ್ಲಿ ಅರೆಭಾಷಿಕ ಪ್ರಮುಖರೊಂದಿಗೆ ಸಮಾಲೋಚಿಸಿ ಮತ ಯಾಚಿಸಿದ್ದು ನಿಜ. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ರಾಜ್ಯದ ಉಪ ಮುಖ್ಯಮಂತ್ರಿಗಳಿಗೆ ಸಲ್ಲಬೇಕಾದ ಗೌರವವನ್ನು ಸಮಾಜದ ವತಿಯಿಂದ ನೀಡಿದ್ದಾರೆ. ಇದು ಅವರ ಕರ್ತವ್ಯ ಮತ್ತು ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಆದರೆ ಸೋಮಣ್ಣ ಅವರು ಗೌಡ ಜನಾಂಗದವರಲ್ಲಿ ಲಕ್ಷ್ಮಣ್ ಗೌಡರ ಪರ ಮತಯಾಚನೆ ಮಾಡಿದ್ದಾರೆ ಎಂದು ಬಿಜೆಪಿಯ ಕೆಲವು ಅರೆಭಾಷಿಕ ಮಿತ್ರರು ಕಪೋಲಕಲ್ಪಿತ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಮತ ನೀಡಬೇಕು, ಯಾಕೆ ನೀಡಬೇಕು, ಧರ್ಮದ ರಕ್ಷಣೆ, ದೇಶದ ಭದ್ರತೆ, ಅಕ್ರಮ, ಅನ್ಯಾಯ ಇವುಗಳ ಬಗ್ಗೆ ಬಿಜೆಪಿಯವರಿಂದ ಅರೆಭಾಷಿಕರು ಕಲಿಯಬೇಕಾಗಿಲ್ಲ. ಸ್ವಂತ ಬುದ್ಧಿಯಿಂದ ಮತ ಚಲಾಯಿಸುವಷ್ಟು ವಿವೇಚನಾ ಸಾಮಥ್ರ್ಯವನ್ನು ಕೊಡಗಿನ ಅರೆಭಾಷಿಕರು ಹಾಗೂ ಒಕ್ಕಲಿಗರು ಹೊಂದಿದ್ದಾರೆ. ಯಾವುದೇ ಪಕ್ಷ ಇರಲಿ, ವ್ಯಕ್ತಿ ಇರಲಿ ರಾಜ್ಯ ಸರಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಾತಿಯಲ್ಲಿ ಒಕ್ಕಲಿಗರೇ ಆಗಿರುವ ಡಿ.ಕೆ.ಶಿವಕುಮಾರ್, ವೆಂಕಟೇಶ್, ಮಂತರ್ ಗೌಡ ಹಾಗೂ ಅಭ್ಯರ್ಥಿ ಲಕ್ಷ್ಮಣ್ ಗೌಡ ಅವರನ್ನು ಅರೆಭಾಷಿಕರು ಸ್ವಾಗತಿಸಿರುವುದು ನಮ್ಮ ಸ್ವಾಭಿಮಾನ ಮತ್ತು ಸಂಪ್ರದಾಯವಾಗಿದೆ.
ಅತಿಥಿ ಸತ್ಕಾರದ ಸಂಪ್ರದಾಯವನ್ನು ಅರೆಭಾಷಿಕರು ಯಾವುದೇ ಪಕ್ಷ ಅಥವಾ ವ್ಯಕ್ತಿಗಳಿಂದ ಕಲಿಯುವ ಅಗತ್ಯವಿಲ್ಲ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರುಗಳೊಂದಿಗೆ ಅರೆಭಾಷಿಕರ ಒಡನಾಟ ತುಂಬಾ ಆತ್ಮೀಯವಾಗಿದೆ. ನಮ್ಮ ಸಮಾಜದ ಕೆಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮತ್ತು ವಿದ್ಯಾನಿಧಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿಕೆ ಸೇರಿದಂತೆ ಹಲವು ಬೇಡಿಕೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರ ಸಹಕಾರದ ಅಗತ್ಯವಿದೆ. ಬಿಜೆಪಿಯ ಅರೆಭಾಷಿಕ ಮಿತ್ರರು ಅರೆಭಾಷಿಕರ ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡದೆ ಸಮಾಜದ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಸೂದನ ಈರಪ್ಪ ಮನವಿ ಮಾಡಿದ್ದಾರೆ.








