ಹುಣುಸೂರು ಏ.18 NEWS DESK : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರಕಾರ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ, ಸೌಮ್ಯ ಸ್ವಭಾವದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಹುಣುಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಮೋದಿ ಅವರ ನೇತೃತ್ವದ ಸರಕಾರದಿಂದ ಹೊಗೆಸೊಪ್ಪು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ದೇಶದ ಅಭಿವೃದ್ಧಿಯನ್ನೇ ಅಜೆಂಡವಾಗಿಸಿಕೊಂಡಿರುವ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು, ಅಭ್ಯರ್ಥಿ ಯದುವೀರ್ ಅವರಿಗೆ ಬಹುಮತ ನೀಡಿ ವಿಜಯಶಾಲಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ ವಿಕಾಸ ಭಾರತ ನಿರ್ಮಾಣದ ಸಂಕಲ್ಪ ತೊಟ್ಟಿರುವ ನರೇಂದ್ರಮೋದಿಯವರ ಕನಸನ್ನು ನನಸಾಗಿಸಲು ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ನಮ್ಮ ಕುಟುಂಬ ಈ ನಾಡಿನ ಪ್ರಗತಿಗಾಗಿ ನೀಡಿರುವ ಕೊಡುಗೆಯಂತೆ ನಾನು ಕೂಡ ಜನಪರವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಶಾಸಕ ಜಿ.ಡಿ.ಹರೀಶ್ಗೌಡ ಮಾತನಾಡಿ ಕಾಂಗ್ರೆಸ್ ಸರಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಸೇರಿದಂತೆ ಅನೇಕ ಜನಪರ, ರೈತಪರ ಕೆಲಸವನ್ನು ಮಾಡಿದ್ದಾರೆ. ಕುಮಾರಣ್ಣ ಗೆದ್ದು ಕೇಂದ್ರದ ಮಂತ್ರಿಯಾಗುವುದು ಮತ್ತು ಐದು ಲಕ್ಷ ಮತಗಳ ಅಂತರದಲ್ಲಿ ಯದುವೀರ್ ಒಡೆಯರ್ ಅವರು ಗೆಲ್ಲುವುದು ಗ್ಯಾರಂಟಿಯಾಗಿದೆ. ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡಿ ಎಂದು ಮನವಿ ಮಾಡಿದರು.ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ನಗರಾಧ್ಯಕ್ಷ ನಾರಾಯಣ್, ಜಿಲ್ಲಾ ಉಪಾಧ್ಯಕ್ಷೆ ಸವಿತಾಚವಾಣ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮಹಿಳಾ ಅಧ್ಯಕ್ಷೆ ಯಶೋಧ ತಾಂಡವ ಮೂರ್ತಿ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಪಾಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.