ಸೋಮವಾರಪೇಟೆ ಏ.19 NEWS DESK : ಕೊಡಗು ಮತ್ತು ಹಾಸನ ಮಠಾಧಿಪತಿಗಳ ಪರಿಷತ್ತಿನ ಸ್ವಾಮೀಜಿಗಳು ಇಂದು ಮಳೆಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಲ್ಲಿರುವ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಎರಡು ಜಿಲ್ಲೆಗಳ ಮಠಾಧೀಶರು ವಿಶೇಷ ಪ್ರಾರ್ಥನೆ ಸಲ್ಲಿಸಿ ಮಳೆ ನೀಡುವಂತೆ ಕೋರಿದರು. ಮಳೆ ಬಾರದೆ ಮಾನವ ಸಮೂಹ, ಪ್ರಾಣಿ, ಪಕ್ಷಿ, ಅರಣ್ಯ, ಕೃಷಿ ಕ್ಷೇತ್ರ, ಜಲಮೂಲಗಳು ಕಂಗಾಲಾಗಿವೆ. ಮುಂದೆಯೂ ಮಳೆ ಬಾರದೆ ಇದ್ದರೆ ಪರಿಸ್ಥಿತಿ ಕೈಮೀರಬಹುದು ಎನ್ನುವ ಆತಂಕ ಜನರನ್ನು ಕಾಡುತ್ತಿದೆ. ಈ ಕಾರಣದಿಂದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ, ಅರ್ಚನೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ, ದಾಸೋಹ ನಡೆಯಿತು.
ಅರ್ಚಕರುಗಳಾದ ನಂದೀಶ್ ಶಾಸ್ತ್ರಿ, ಮೋಹನಮೂರ್ತಿ ಶಾಸ್ತ್ರಿ ಹಾಗೂ ಸೋಮಶೇಖರ ಶಾಸ್ತಿçಗಳಿಂದ ಪೂಜಾ ವಿಧಿವಿಧಾನಗಳು ನೆರವೇರಿತು.
ಈ ಸಂದರ್ಭ ಮಾತನಾಡಿದ ಅರಮೇರಿ ಶ್ರೀಗಳು ಅಕ್ಕಪಕ್ಕದ ಗ್ರಾಮಗಳ ಜನರು, ರೈತಾಪಿ ವರ್ಗ ಪ್ರತಿವರ್ಷ ಇಲ್ಲಿಗೆ ಆಗಮಿಸಿ ಬೆಟ್ಟ ಹತ್ತಿ ಪೂಜೆ ಸಲ್ಲಿಸುತ್ತಾರೆ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಕೊಡಗಿನಲ್ಲಿಯು ಈ ಬಾರಿ ಉಷ್ಣಾಂಶ ಅತಿಯಾಗಿದ್ದು, ಮಳೆ ವಿಳಂಬವಾಗುತ್ತಿದೆ. ಕುಡಿಯುವ ನೀರಿನ ಕೊರತೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಮಠಾಧೀಶರ ಪರಿಷತ್ತು ವತಿಯಿಂದ ಶಾಂತಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಶ್ರೀಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತಪೂಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಛಂಗಡಿ ಹಳ್ಳಿ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ರಾಜ್ಯ ಸಂಚಾಲಕ ಎ.ಎಸ್.ಮಲ್ಲೇಶ, ತಾಲ್ಲೂಕು ಅಧ್ಯಕ್ಷ ಹಣಕೋಡು ಜಯರಾಜ್, ಅಕ್ಕನ ಬಳಗದ ಕಾರ್ಯದರ್ಶಿ ಮಾಯಾಗಿರೀಶ್, ದೇವಾಲಯ ಆಡಳಿತ ಮಂಡಳಿ ಸದಸ್ಯ ಗಣಪತಿ ಮುಂತಾದವರು ಹಾಜರಿದ್ದರು.